ಎಂ.ಎ. ಬೇಬಿಗೆ ಸಿಪಿಎಂನ ಸಾರಥ್ಯ: ಇಎಂಎಸ್ ಬಳಿಕ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ 2ನೇ ಕೇರಳೀಯ

ಮಧುರೈ: ಸಿಪಿಎಂನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಪೋಲಿಟ್ ಬ್ಯೂರೋ (ಪಿಬಿ) ಸದಸ್ಯ ಕೇರಳದ ಎಂ.ಎ. ಬೇಬಿ (71)ರನ್ನು ಆರಿಸಲಾಗಿದೆ. ಕೇರಳದ ಮಾಜಿ ಮುಖ್ಯಮಂತ್ರಿ ಇಎಂಎಸ್ ನಂಬೂದಿರಿ ಪ್ಪಾಡ್‌ರ ಬಳಿಕ ಈ ಸ್ಥಾನಕ್ಕೇರಿದ ಎರಡನೇ ಕೇರಳೀಯ ಎಂಬ ಹೆಗ್ಗಳಿ ಕೆಗೂ ಎಂ.ಎ. ಬೇಬಿ ಪಾತ್ರರಾಗಿದ್ದಾರೆ.

ಈ ಹಿಂದೆ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕಾರಾಟ್‌ರ ಮಾತೃಭಾಷೆ ಮಲೆಯಾಳ ಆಗಿದ್ದರೂ ಅವರು ಉತ್ತರ ಭಾರತದಲ್ಲೇ ನೆಲೆಸಿದ್ದರು. ಮಧುರೈಯಲ್ಲಿ ನಡೆದ ಸಿಪಿಎಂನ 24ನೇ ಪಾರ್ಟಿ ಕಾಂಗ್ರೆಸ್ (ಮಹಾ ಅಧಿವೇಶನ)ನಲ್ಲಿ ಎಂ.ಎ. ಬೇಬಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸಲಾಗಿದೆ.

ನಿಗದಿತ 75 ವರ್ಷ ಮೀರಿದ ಹಿನ್ನೆಲೆಯಲ್ಲಿ ಪ್ರಕಾಶ್ ಕಾರಾಟ್, ವೃಂದಾ ಕಾರಾಟ್, ಮಾಣಿಕ್ ಸರ್ಕಾರ್, ಶಭಾಷಿಣಿ ಅಲಿ ಸೇರಿದಂತೆ ಆರು ಮಂದಿಯನ್ನು ಪಿ.ಬಿ. ಸ್ಥಾನದಿಂದ ಹೊರತುಪಡಿಸಲಾಗಿದೆ. ಇವರನ್ನು ಕೇಂದ್ರ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ ನಿಗದಿತ 75 ವಯೋಮಿತಿ ಮೀರಿದರೂ  ಮುಖ್ಯಮಂತ್ರಿ ಎಂಬ ನೆಲೆಯಲ್ಲಿ ಪಿಣರಾಯಿ ವಿಜಯನ್‌ರಿಗೆ ವಯೋಮಿತಿಯಲ್ಲಿ ರಿಯಾಯಿತಿ ನೀಡಿ ಅವರನ್ನು ಪೋಲಿಟ್ ಬ್ಯೂರೋ ಸ್ಥಾನದಲ್ಲಿ ಮುಂದುವರಿಯುವ ಅವಕಾಶ ನೀಡಲಾಗಿದೆ. ಪೋಲಿಟ್ ಬ್ಯೂರೋಗೆ ಒಟ್ಟು 18 ಮಂದಿ ಹಾಗೂ ಕೇಂದ್ರ ಸಮಿತಿಗೆ 84 ಸದಸ್ಯರನ್ನು ಆರಿಸಲಾಗಿದೆ.

You cannot copy contents of this page