ಎಡನೀರು ಶ್ರೀಗಳ ಕಾರಿಗೆ ಹಾನಿ : ಬೋವಿಕ್ಕಾನದಲ್ಲಿ ನಾಮಜಪದೊಂದಿಗೆ ಪ್ರತಿಭಟನೆ
ಮುಳಿಯಾರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ವಾಹನ ವಿರುದ್ಧ ಆಕ್ರಮಣ ನಡೆಸಿರುವುದನ್ನು ಪ್ರತಿಭಟಿಸಿ ಹಿಂದೂ ಐಕ್ಯವೇದಿ ಆಯೋಜಿಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದರು. ಬೋವಿಕ್ಕಾನ ಪೇಟೆಯಲ್ಲಿ ನಾಮಜಪದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷ ಎಸ್.ಪಿ. ಶಾಜಿ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಪ್ರಧಾನ ಭಾಷಣ ಮಾಡಿದರು. ಎಡನೀರು ಸ್ವಾಮೀಜಿಯವರ ಕಾರಿನ ವಿರುದ್ಧ ಆಕ್ರಮಣ ನಡೆಸಿದವರನ್ನು ಪೊಲೀಸರು ಬಂಧಿಸಬೇಕು, ಅಲ್ಲದಿದ್ದರೆ ಸಮಾಜದಲ್ಲಿ ಸ್ವಾಮೀಜಿಯವರನ್ನು ಆಕ್ರಮಿಸಿದರೆ ಹೇಳಲು, ಕೇಳಲು ಯಾರೂ ಇಲ್ಲವೆಂಬ ಚಿಂತೆ ಉಂಟಾಗಬಹುದೆಂದು ಅದು ಸಮಾಜದಲ್ಲಿ ಅರಾಜಕತ್ವ ಸೃಷ್ಟಿಗೆ ಕಾರಣವಾಗಬಹುದೆಂದು ಅವರು ಅಭಿಪ್ರಾಯಪಟ್ಟರು. ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್, ಜಿಲ್ಲಾ ಸಂಘ ಚಾಲಕ್ ಪ್ರಭಾಕರನ್ ಮಾಸ್ತರ್ ಮಾತನಾಡಿದರು. ರಾಜನ್ ಮುಳಿಯಾರು ಸ್ವಾಗತಿಸಿದರು. ಪ್ರತಿಭಟನೆಗೆ ವಿ.ಹಿಂ.ಪ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಎ. ಕರುಣಾಕರನ್ ಮಾಸ್ತರ್, ಗೋವಿಂದನ್ ಮಾಸ್ತರ್, ಸುರೇಶ್ ಬಾಬು, ವಾಮನ ಆಚಾರ್ಯ, ವಿಠಲ ಭಟ್ ನೇತೃತ್ವ ನೀಡಿದರು.