ಎ.ಡಿ.ಎಂ. ಆತ್ಮಹತ್ಯೆ ಪ್ರಕರಣ : ಜೈಲು ಸೇರಿದ ದಿವ್ಯಾ; ಇಂದು ಜಾಮೀನು ಅರ್ಜಿ ಸಲ್ಲಿಕೆ
ಕಣ್ಣೂರು: ಕಣ್ಣೂರು ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ (ಎಡಿಎಂ) ನವೀನ್ ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಪಿ.ಪಿ. ದಿವ್ಯಾರನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನಿನ್ನೆಯಿಂದ ಮುಂದಿನ ಹದಿ ನಾಲ್ಕು ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಅವರು ಜಾಮೀನು ಕೋರಿ ಇಂದು ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಪಿ.ಪಿ. ದಿವ್ಯಾ (40) ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನಿನ್ನೆ ತಿರಸ್ಕರಿಸಿ ಅವರಿಗೆ ಜಾಮೀನು ನಿರಾಕರಿಸಿ ತೀರ್ಪು ನೀಡಿತ್ತು. ಅದಾದ ಬೆನ್ನಲ್ಲೇ ಅವರು ಜಿಲ್ಲಾ ತನಿಖಾ ತಂಡದ ಮುಂದೆ ಶರಣಾಗಿದ್ದರು. ನಂತರ ಪೊಲೀಸರು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಲಯದ ಆದೇಶ ಪ್ರಕಾರ ಅವರನ್ನು ನಿನ್ನೆ ರಾತ್ರಿ ಕಣ್ಣೂರು ಮಹಿಳಾ ಜೈಲಿಗೆ ಸಾಗಿಸಿ ಅಲ್ಲಿ 14 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಆತ್ಮಹತ್ಯೆಗೈದ ಎಡಿಎಂ ನವೀನ್ ಬಾಬುರ ಸಹೋದರ ಪ್ರವೀಣ್ ಬಾಬು ನೀಡಿದ ದೂರಿನಂತೆ ದಿವ್ಯಾ ವಿರುದ್ಧ ಪೊಲೀಸರು ಅಕ್ಟೋಬರ್ 17ರಂದು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಪ್ರಕರಣ ದಾಖಲಿಸಿಕೊಂಡಿದ್ದರು. ನವೀನ್ ಬಾಬು ಸಾವನ್ನಪ್ಪಿದ 14 ದಿನಗಳ ತನಕ ದಿವ್ಯಾ ತಲೆಮರೆಸಿಕೊಂಡಿದ್ದರು. ನಂತರ ನಿನ್ನೆ ಪೊಲೀಸರ ಮುಂದೆ ಶರಣಾಗಿದ್ದರು.