ಕಣಿಪುರ ಕ್ಷೇತ್ರ ಜಾತ್ರೆ ಮಧ್ಯೆ ಪಂ. ಸದಸ್ಯೆಯ ಮೊಬೈಲ್ ಫೋನ್ ಕಳವು : ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ವಾಣಿನಗರ ನಿವಾಸಿ ಬಲೆಗೆ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ವಾರ್ಷಿಕ ಉತ್ಸವದ ಮಧ್ಯೆ ಪಂಚಾಯತ್ ಸದಸ್ಯೆಯ ಮೊಬೈಲ್ ಫೋನ್ ಕಳವುಗೈದ ಪ್ರಕರಣದ ಆರೋಪಿಯನ್ನು ಕುಂಬಳೆ ಪೊಲೀಸರು ಬಲೆಗೆ ಹಾಕಿಕೊಂಡಿದ್ದಾರೆ. ಸಿಸಿ ಕ್ಯಾಮರಾದ ದೃಶ್ಯಗಳ ಆಧಾರದಲ್ಲಿ ಕಳವು ಆರೋಪಿಯನ್ನು ಬಲೆಗೆ ಹಾಕಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಪೆರ್ಲ ಬಳಿಯ ವಾಣಿನಗರ ನಿವಾಸಿ ಉಮ್ಮರ್ ಯಾನೆ ಉಮ್ಮರ್ ಫಾರೂಕ್ (59) ಎಂಬಾತ ಪೊಲೀಸರ ಬಲೆಯಲ್ಲಿರುವ ವ್ಯಕ್ತಿಯಾಗಿದ್ದಾನೆ. ಈತನನ್ನು ಸಮಗ್ರವಾಗಿ ತನಿಖೆಗೊಳಪಡಿಸಿದರೆ ಹೆಚ್ಚಿನ ಮಾಹಿತಿಗಳು ಬಹಿರಂಗಗೊಳ್ಳಬಹುದೆಂಬ ನಿರೀಕ್ಷೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ಕಣಿಪುರ ಕ್ಷೇತ್ರ ಜಾತ್ರೆಯ ಸಂದರ್ಭದಲ್ಲಿ ರಾತ್ರಿ ವೇಳೆ ಕ್ಷೇತ್ರದೊಳಗೆ ಪಂಚಾಯತ್ ಸದಸ್ಯೆ ವಿದ್ಯಾ ಪೈ ಅವರ 16,500 ರೂ. ಮೌಲ್ಯದ ಮೊಬೈಲ್ ಫೋನ್ ಕಳವಿಗೀಡಾಗಿತ್ತು. ಈ ಬಗ್ಗೆ ವಿದ್ಯಾ ಪೈ ಅವರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಕ್ಷೇತ್ರ ಹಾಗೂ ಪರಿಸರ ಪ್ರದೇಶದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳನ ಗುರುತು ಪತ್ತೆಹಚ್ಚಲಾಗಿದೆ.
ಉಮ್ಮರ್ ಫಾರೂಕ್ ಕ್ಷೇತ್ರದೊಳಗೆ ಅತ್ತಿತ್ತ ತಿರುಗಾಡುವುದು ಹಾಗೂ ಫೋನ್ ಕಳವುಗೈದ ಬಳಿಕ ಅಲ್ಲಿಂದ ಪರಾರಿಯಾಗುವ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಹಾಗೂ ಬದಿಯಡ್ಕ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಪ್ರಕರಣಗಳಿಗೆ ಸಂಬಂಧಿಸಿ ಸೆರೆಗೀಡಾಗಿ ಜೈಲಿನಲ್ಲಿದ್ದ ಉಮ್ಮರ್ ಫಾರೂಕ್ ಇತ್ತೀಚೆಗೆ ಬಿಡುಗಡೆಗೊಂಡಿದ್ದನು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಜನರು ಸೇರುವ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಉತ್ಸವ ಸ್ಥಳಕ್ಕೆ ಉಮ್ಮರ್ ಫಾರೂಕ್ ಬರಲು ಸಾಧ್ಯತೆ ಇದೆ ಎಂದೂ ಇದರಿಂದ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ತಿಳಿಸಿ ಪೊಲೀಸರು ಇತ್ತೀಚೆಗೆ ಸೂಚನೆ ನೀಡಿದ್ದರು. ಇದೀಗ ಬಲೆಯಲ್ಲಿರುವ ವ್ಯಕ್ತಿಯ ಫೊಟೋ ಸಹಿತ ಪೊಲೀಸರು ಜನರಿಗೆ ಮುನ್ಸೂಚನೆ ನೀಡಿದ್ದರು.