ಕರುವನ್ನೂರು ಬ್ಯಾಂಕ್ ವಂಚನೆ: ಎಂ.ಎಂ. ವರ್ಗೀಸ್ಗೆ ಇ ಡಿಯಿಂದ ಮತ್ತೆ ನೋಟೀಸ್
ಕೊಚ್ಚಿ: ಕರುವನ್ನೂರು ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಹಾಜರಾಗಬೇಕೆಂದು ತಿಳಿಸಿ ಸಿಪಿಎಂ ತೃಶೂರು ಜಿಲ್ಲಾ ಸೆಕ್ರೆಟರಿ ಎಂ.ಎಂ. ವರ್ಗೀಸ್ಗೆ ಎನ್ ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇ.ಡಿ) ಮತ್ತೆ ನೋಟೀಸು ನೀಡಿದೆ. ಮುಂದಿನ ಸೋಮವಾರ ಕೊಚ್ಚಿಯ ಕಚೇರಿಯಲ್ಲಿ ಹಾಜರಾಗುವಂತೆ ನಿರ್ದೇಶಿಸಲಾಗಿದೆ. ಈ ಹಿಂದೆ ಮೂರು ಬಾರಿ ನೋಟೀಸು ನೀಡಲಾಗಿದೆಯಾದರೂ ಚುನಾವಣಾ ಪ್ರಚಾರದ ಹೊಣೆಗಾರಿಕೆಯಿರುವುದರಿಂದ ಹಾಜರಾಗಲು ಸಾಧ್ಯವಿಲ್ಲವೆಂದು ವರ್ಗೀಸ್ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮುಗಿದು ಹಾಜರಾಗುವಂತೆ ಇ.ಡಿ. ತಿಳಿಸಿದೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಂದ ಮುಟ್ಟುಗೋಲು ಹಾಕಿದ ಸೊತ್ತು ಹಾಗೂ ಹಣವನ್ನು ವಂಚನೆಗೀಡಾದ ಠೇವಣಿದಾರರಿಗೆ ವಿತರಿಸುವುದಾಗಿ ಇ.ಡಿ ಈ ತಿಂಗಳ ೧೬ರಂದು ತಿಳಿಸಿತ್ತು. ೫೪ ಮಂದಿ ಆರೋಪಿಗಳಿಂದಾಗಿ ೧೦೮ ಕೋಟಿ ರೂಪಾಯಿಗಳ ಸೊತ್ತುಗಳನ್ನು ಇ.ಡಿ. ಮುಟ್ಟುಗೋಲು ಹಾಕಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಹಾಗೂ ಅನಧಿಕೃತವಾಗಿ ಆರೋಪಿಗಳು ಗೂಢಾಲೋಚನೆ ನಡೆಸಿ ೩೦೦ ಕೋಟಿ ರೂಪಾಯಿಗಳ ವಂಚನೆ ಕರುವನ್ನೂರು ಸಹಕಾರಿ ಬ್ಯಾಂಕ್ನಲ್ಲಿ ನಡೆಸಿರುವುದಾಗಿ ಇ.ಡಿ ಪತ್ತೆಹಚ್ಚಿತ್ತು.