ಕರ್ನಾಟಕದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ ಅಶ್ಲೀಲ ವೀಡಿಯೋ ಪ್ರಕರಣ
ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧ ಕೇಸು ದಾಖಲಾಗುವು ದರೊಂದಿಗೆ ಕರ್ನಾಟಕದ ರಾಜಕೀಯ ದಲ್ಲಿ ಭಾರೀ ಬಿರುಗಾಳಿಯನ್ನು ಎಬ್ಬಿಸಿದಂತಾಗಿದೆ. ಅಶ್ಲೀಲ ವೀ ಡಿಯೋ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲುಕೌಟ್ ನೋಟೀಸ್ ಜ್ಯಾರಿಮಾಡಿದ್ದು, ಇದರಿಂದ ಅವರ ಬಂಧನವಾಗುವುದು ಖಚಿತಗೊಂಡಿದೆ.
ಇದೇ ವೇಳೆ ಜರ್ಮನ್‌ಗೆ ತೆರಳಿರುವ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೇಳಿದ್ದಾರೆ. ಆದರೆ ಅದನ್ನು ಎಸ್‌ಐಟಿ ತಿರಸ್ಕರಿಸಿದೆ.
ಶೀಘ್ರದಲ್ಲೇ ಪ್ರಜ್ವಲ್ ಕರ್ನಾಟಕಕ್ಕೆ ವಾಪಸಾಗಲಿದ್ದಾರೆಂದು ತನಿಖಾ ತಂಡ ನಿರೀಕ್ಷೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳ ಬಳಿ ಎಸ್‌ಐಟಿ ತೀವ್ರ ನಿಗಾ ವಹಿಸಿದೆ.
ಇದೇ ವೇಳೆ ಪ್ರಜ್ವಲ್ ತನಿಖೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರೂ, ಕಾನೂನು ವ್ಯಾಪ್ತಿಯಲ್ಲಿ ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಆದರೂ ಅಧಿಕಾರಿಗಳು ಕಾನೂನು ತಜ್ಞರ ಸಲಹೆ ಕೇಳಿದ್ದಾರೆ. ಅಗತ್ಯವಿದ್ದರೆ ಪೊಲೀಸರು ಪ್ರಜ್ವಲ್ ಇದ್ದಲ್ಲಿಗೆ ಹೋಗಿ ಬಂಧಿಸಿ ಭಾರತಕ್ಕೆ ತರಲಿದ್ದಾರೆಂದು ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದ್ದಾರೆ.
ಹಾಸನದಲ್ಲಿ ಮತ್ತೊಬ್ಬ ಸಂತ್ರಸ್ಥೆ ಪ್ರಜ್ವಲ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಅಧಿಕೃತವಾಗಿ ಇಬ್ಬರು ಮಹಿಳೆಯರಿಂದ ದೂರು ದಾಖಲಾಗಿದೆ. ಕಿರುಕುಳಕ್ಕೊಳಗಾದ ಸಂತ್ರಸ್ಥೆಯನ್ನು ಪತ್ತೆಹಚ್ಚಿ ಅವರಿಂದ ಹೇಳಿಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಸಚಿವ ತಿಳಿಸಿದ್ದಾರೆ.
ಇದೇ ವೇಳೆ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಆರೋಪ- ಪ್ರತ್ಯಾರೋಪಗಳನ್ನು ಹೊರಿಸತೊಡಗಿವೆ.