ಕಾರು-ಲಾರಿ ಢಿಕ್ಕಿಹೊಡೆದು ಭೀಕರ ಅಪಘಾತ: ಮಗು ಸೇರಿದಂತೆ ಕಾಸರಗೋಡಿನ ಐದು ಮಂದಿ ದಾರುಣ ಸಾವು
ಕಾಸರಗೋಡು: ಕಾರು ಮತ್ತು ಗ್ಯಾಸ್ ಸಿಲಿಂಡರ್ ಹೇರಿಕೊಂಡು ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡು ನಿವಾಸಿಗಳಾದ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಸಾವನ್ನ ಪ್ಪಿದ ಘಟನೆ ಕಣ್ಣೂರು ಬಳಿ ನಡೆದಿದೆ.
ಕಾರು ಚಲಾಯಿಸುತ್ತಿದ್ದ ನೀಲೇಶ್ವರ ಸಮೀಪದ ಕಾಲಿಚ್ಚಾನಡ್ಕ ಶಾಸ್ತಾಂಪಾರ ಶ್ರೀಶೈಲದ ಕೆ.ಎನ್. ಪದ್ಮಕುಮಾರ್ (59), ಇವರ ಜೊತೆ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂಬಂಧಿಕರಾದ ಬಂದಡ್ಕ ಸಮೀಪದ ಭೀಮನಡಿ ಮಂಟಪಂ ಕಮ್ಮಾಡತ್ ಚೂರಿಕ್ಕಾಡನ್ ಸುಧಾಕರನ್ (52), ಅವರ ಪತ್ನಿ ಅಜಿತ (35), ಅಜಿತಾರ ತಂದೆ ಪುತ್ತೂರು ಕೊಳುಮ್ಮಲ್ ಕೃಷ್ಣನ್ (65), ಅಜಿತಾರ ಸಹೋದರ ಅಜಿತ್‌ರ ಪುತ್ರ ಆಕಾಶ್ ಎಂಬಿವರು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ.
ಕಣ್ಣೂರಿಗೆ ಸಮೀಪದ ಕಣ್ಣಾಪುರ ಚೆರುಕುನ್ನು ಕುನ್ನೆಚ್ಚೇರಿ ಪೆಟ್ರೋಲ್ ಬಂಕ್ ಬಳಿ ನಿನ್ನೆ ರಾತ್ರಿ 10.15ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದವರು ಕಣ್ಣೂರಿನಿಂದ ನೀಲೇಶ್ವರದತ್ತ ಪ್ರಯಾಣಿಸುತ್ತಿದ್ದ ವೇಳೆ ದಾರಿ ಮಧ್ಯೆ ಎದುರುಗಡೆಯಿಂದ ಗ್ಯಾಸ್ ಸಿಲಿಂಡರ್ ಹೇರಿಕೊಂಡು ಬರುತ್ತಿದ್ದ ಲಾರಿ ಮುಖಾಮುಖಿಯಾಗಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎದುರುಭಾಗ ಬೋನೆಟ್ ಲಾರಿಯ ಎದುರುಗಡೆ ನುಗ್ಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದನ್ನು ಕಂಡ ಅಲ್ಲೇ ಪಕ್ಕದ ಟರ್ಫ್‌ನಲ್ಲಿ ಆಟವಾಡುತ್ತಿದ್ದವರು ಮತ್ತು ಊರವರು ತಕ್ಷಣ ಧಾವಿಸಿ ಬಂದು ಕಾರನ್ನು ಒಡೆದು ಅದರೊಳಗೆ ಸಿಲುಕಿಕೊಂಡವರನ್ನು ಹೊರತೆಗೆದರು. ಬಳಿಕ ಪೊಲೀಸರು ಮತ್ತು ಅಗ್ನಿಶಾಮಕದಳ ಆಗಮಿಸಿ ನಡೆಸಿದ ರಕ್ಷಾ ಕಾರ್ಯಾಚರಣೆಯಲ್ಲಿ ಗಾಯಾಳುಗಳೆಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಅಪಘಾತದಲ್ಲಿ ಸಾವನ್ನಪ್ಪಿದ ಸುಧಾಕರನ್‌ರ ಮಗ ಸೌರವ್‌ನನ್ನು ಕಲ್ಲಿಕೋಟೆಯ ಶಿಕ್ಷಣ ಸಂಸ್ಥೆಯೊಂದಕ್ಕೆ ಸಿಎ ಕೋರ್ಸ್‌ಗೆ ಸೇರ್ಪಡೆಗೊಳಿಸಲೆಂದು ಸುಧಾಕರನ್ ಮತ್ತು ಅವರ ಕುಟುಂಬ ಕಾರಿನಲ್ಲಿ ಕಲ್ಲಿಕೋಟೆಗೆ ಹೋಗಿದ್ದರು. ಸೌರವ್‌ನನ್ನು ಕಲ್ಲಿಕೋಟೆಯ ಹಾಸ್ಟೆಲ್‌ನಲ್ಲಿ ಸೇರ್ಪಡೆಗೊಳಿಸಿದ ಬಳಿಕ ಕುಟುಂಬದವರು ಕಾರಿನಲ್ಲಿ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಈ ಭೀಕರ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ಇಂದು ಬೆಳಿಗ್ಗೆ ಆರಂಭ ಗೊಂಡಿತು. ಕಾರಿನ ಹಿಂದುಗಡೆಯಿಂದ ಲಾರಿಯೊಂದು ಮೊದಲು ಕಾರಿಗೆ ಢಿಕ್ಕಿ ಹೊಡೆದಿತ್ತೆಂದೂ ಆಗ ಎದುರುಗಡೆಯಿಂದ ಬಂದ ಗ್ಯಾಸ್ ಸಿಲಿಂಡರ್ ಹೇರಿದ ಲಾರಿ ಆ ಕಾರಿಗೆ ಢಿಕ್ಕಿ ಹೊಡೆದಿತ್ತೆಂದು ಪೊಲೀಸರು ಹೇಳುತ್ತಿದ್ದಾರೆ. ಆ ಎರಡೂ ಲಾರಿಗಳನ್ನು ಮತ್ತು ಅವುಗಳ ಚಾಲಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮೋಟಾರು ವಾಹನ ಇಲಾಖೆಯವರು ಇನ್ನೊಂದೆಡೆ ಈ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ.