ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಖೋಟಾನೋಟು ವಿತರಣಾ ತಂಡ ಸಕ್ರಿಯ

ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳನ್ನು ಕೇಂದ್ರೀ ಕರಿಸಿ ೫೦೦ ರೂ. ಮುಖಬೆಲೆಯ ನಕಲಿ ಖೋಟಾನೋಟು ವಿತರಿಸುವ ತಂಡಗಳು ಕಾರ್ಯವೆಸಗುತ್ತಿರುವ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ. ಇದರ ಮೂಲ ಪತ್ತೆಗಾಗಿ  ಕಣ್ಣೂರು ಸಿಟಿ ಎಸ್‌ಪಿ ಸಿಬಿ ಟೋಮ್‌ರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ಖೋಟಾನೋಟು ವಿತರಣೆಗೆ ಸಂಬಂಧಿಸಿ ಚೀಮೇನಿಯ ಡ್ರೈವಿಂಗ್ ಸ್ಕೂಲ್ ಒಂದರ ಸಿಬ್ಬಂದಿ ಶೋಭಾ ಮತ್ತು ಪಯ್ಯನ್ನೂರು ಕಂಡೋತ್ತ್‌ನ ವಾಹನ ಮೆಕ್ಯಾನಿಕ್ ಶಿಜು ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಹೊರತಾಗಿ ನೀಲೇಶ್ವರದ ಮುನೀರ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆತನನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯಾದ್ಯಂತವಾಗಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಬಂಧಿತರ ಪೈಕಿ ಪಯ್ಯನ್ನೂರಿನ ಶಿಜು, ಕಣ್ಣೂರು ನಗರದ ಮದ್ಯ ಬಾರ್ ಒಂದಕ್ಕೆ ೨೬೦೦ ರೂ.ವನ್ನು ಬಿಲ್ ರೂಪದಲ್ಲಿ ಪಾವತಿಸಿದ್ದನು. ಆ ವೇಳೆ ಅದರಲ್ಲಿ ೫೦೦ ರೂ. ಮುಖಬೆಲೆಯ ೫ ಖೋಟಾನೋಟುಗಳು ಪತ್ತೆಯಾ ಗಿವೆ. ಆ ಬಗ್ಗೆ ಲಭಿಸಿದ ದೂರಿನಂತೆ ಕಣ್ಣೂರು ಪೊಲೀಸರು ಆತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿ ಸಿದಾಗ ಆತ ನೀಡಿದ ಹೇಳಿಕೆಯಂತೆ ಚೀಮೇನಿ ಡ್ರೈವಿಂಗ್ ಸ್ಕೂಲ್‌ನ ಸಿಬ್ಬಂದಿ ಶೋಭಾಳನ್ನು ಪೊಲೀಸರು ಬಳಿಕ ಬಂಧಿಸಿದ್ದಾರೆ. ಮಾತ್ರವಲ್ಲ ಆಕೆಯ ಮನೆಯಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದಾಗ ಅಲ್ಲಿ ಖೋಟಾನೋಟು ಮುದ್ರಿಸುವ ಯಂತ್ರ ಮತ್ತಿತರ ಸಾಮಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತೆ ಶೋಭಾ ಖೋಟಾನೋಟು ವಿತರಣಾ ಜಾಲದ ಕೊಂಡಿಯಾಗಿರು ವುದಾಗಿ ಪೊಲೀಸರು ಶಂಕಿಸಿದ್ದಾರೆ. ತನ್ನ ಮನೆಯಿಂದ ಪತ್ತೆಹಚ್ಚಲಾದ ಪ್ರಿಂಟಿಂಗ್ ಯಂತ್ರ ಬಳಸಿ ಖೋಟಾನೋಟು ಮುದ್ರಿಸಲಾಗಿಲ್ಲವೆಂದು ಆಕೆ ಪೊಲೀಸರಲ್ಲಿ ಹೇಳಿಕೆ ನೀಡಿದ್ದು, ಆದ್ದರಿಂದ ಆ ಪ್ರಿಂಟಿಂಗ್ ಯಂತ್ರವನ್ನು ವೈಜ್ಞಾನಿಕ ಪರೀಕ್ಷೆಗೊಳ ಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಶೋಭಾ ನೀಡಿದ ಹೇಳಿಕೆ ಪ್ರಕಾರ ಪೊಲೀಸರು ಬಳಿಕ ನೀಲೇಶ್ವರದ ಮುನೀರ್‌ನನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page