ಕುಂಜತ್ತೂರಿನಲ್ಲಿ ನಾಡನ್ನು ಬೆಚ್ಚಿ ಬೀಳಿಸಿದ ಭೀಕರ ವಾಹನ ಅಪಘಾತ: ತಂದೆ, ಇಬ್ಬರು ಮಕ್ಕಳು ದಾರುಣ ಮೃತ್ಯು; ಶೋಕಸಾಗರ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಕುಂಜತ್ತೂರಿನಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ತಂದೆ ಹಾಗೂ ಇಬ್ಬರು ಮಕ್ಕಳು ಮೃತ ಪಟ್ಟ ದಾರುಣ ಘಟನೆ ಇಡೀ ನಾಡನ್ನೇ ಬೆಚ್ಚಿಬೀಳಿಸಿದೆ. ಕಾರು ಹಾಗೂ ಆಂಬುಲೆನ್ಸ್ ಮುಖಾ ಮುಖಿ ಢಿಕ್ಕಿ ಹೊಡೆದು ಈ ಅಪ ಘಾತ ಸಂಭವಿ ಸಿದೆ. ಕಾರಿನಲ್ಲಿದ್ದ ತೃಶೂರು ನಿವಾಸಿಗಳಾದ ತಂದೆ ಹಾಗೂ ಇಬ್ಬರು ಮಕ್ಕಳು ಮೃತ ಪಟ್ಟಿದ್ದಾರೆ. ಆಂಬುಲೆನ್ಸ್‌ನಲ್ಲಿದ್ದ ನಾಲ್ಕು ಮಂದಿ ಗಾಯ ಗೊಂಡಿದ್ದಾರೆ.
ತೃಶೂರು ಇರಿಞಾಲಕುಡ ಶ್ರೀಕಂಠೇಶ್ವರ ಮಹಾದೇವ ಕ್ಷೇತ್ರ ಸಮೀಪದ ಪುದುಮನ ಶಿವ ಕುಮಾರ್ ಮೆನೋನ್ (54), ಮಕ್ಕಳಾದ ಶರತ್ (23), ಸೌರವ್ (14) ಎಂಬಿವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇವರು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಕೊಲ್ಲೂರು ಶ್ರೀ ಮೂಕಾಂ ಬಿಕಾ ಕ್ಷೇತ್ರ ದಶನ ನಡೆಸಿದ ಇವರು ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಆಂಬುಲೆನ್ಸ್‌ನಲ್ಲಿದ್ದ ಚಟ್ಟಂಚಾಲ್ ನಿವಾಸಿಗಳಾದ ಶಿವದಾಸ್, ಪತ್ನಿ ಉಷಾ, ಆಂಬುಲೆನ್ಸ್ ಚಾಲಕ ಅಬ್ದುಲ್ ರಹ್ಮಾನ್, ಆಸ್ಪತ್ರೆ ನೌಕರ ರೋಬಿನ್ ಎಂಬಿವರು ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚಟ್ಟಂಚಾಲ್‌ನಲ್ಲಿ ಮೊನ್ನೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕಾಸರಗೋಡಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಉಷಾರನ್ನು ಆಂಬುಲೆನ್ಸ್‌ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ಆಘಾತಕ್ಕೆ ಕಾರು ನಜ್ಜು ಗುಜ್ಜಾಗಿದ್ದು, ಆಂಬುಲೆನ್ಸ್ ಮಗುಚಿ ಬಿದ್ದಿದೆ.
ನಜ್ಜುಗುಜ್ಜಾದ ಕಾರಿನಿಂದ ನಾಗರಿಕರು ಹಾಗೂ ಅಗ್ನಿಶಾಮಕದಳ, ಪೊಲೀಸರು ಸೇರಿ ಮೂವರನ್ನು ಹೊರತೆಗೆದಿದ್ದಾರೆ. ಶಿವಕುಮಾರ್ ಹಾಗೂ ಶರತ್ ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೌರವ್‌ನನ್ನು ಮಂಗಳೂರಿನ ಆಸ್ಪತ್ರೆಗೆ ತಲು ಪಿಸಿದರೂ ಜೀವರಕ್ಷಿಸಲಾಗಲಿಲ್ಲ. ಮೃತದೇಹವನ್ನು ಬಳಿಕ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ತಲುಪಿಸಲಾಯಿತು.
೩೫ ವರ್ಷಗಳಿಂದ ಯುಎಇಯಲ್ಲಿ ಉದ್ಯೋಗದಲ್ಲಿದ್ದ ಶಿವಕುಮಾರ್ ಕಳೆದ ತಿಂಗಳು ಊರಿಗೆ ಮರಳಿದ್ದು, ಈ ತಿಂಗಳ 18ರಂದು ಮರಳಿ ಗಲ್ಫ್‌ಗೆ ಹೋಗುವ ಸಿದ್ಧತೆಯಲ್ಲಿದ್ದರು.
ಬಿ.ಟೆಕ್ ಪದವೀಧರನಾದ ಶರತ್ ಮುಂದಿನವಾರ ಅಯರ್ಲೇಂಡಿಗೆ ತೆರಳುವ ಸಿದ್ಧತೆಯಲ್ಲಿದ್ದರು. ಸೌರವ್ ಇರಿಂಞಾಲಕುಡ ನೇಶನಲ್ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿ ಯಾಗಿದ್ದಾನೆ. ಶಿವಕುಮಾರ್‌ರ ಪತ್ನಿ ಸ್ಮಿತಾರಿಗೆ ಇತ್ತೀ ಚೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರೀಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ಹಿನ್ನೆಲೆ ಯಲ್ಲಿ ಶಿವಕುಮಾರ್ ಹಾಗೂ ಮಕ್ಕಳು ಮಾತ್ರವೇ ಬೆಂಗಳೂರಿಗೆ ತೆರಳಿದ್ದರು.
ಇರಿಞಾಲಕುಡ ಶ್ರೀ ಕೂಡಲ್ ಮಾಣಿಕ್ಯ ಕ್ಷೇತ್ರದ ಉತ್ಸವ ದಲ್ಲಿ ಪಾಲ್ಗೊಳ್ಳಲೆಂದು ಶಿವಕುಮಾರ್ ಇತ್ತೀಚೆಗಷ್ಟೇ ಯುಎಇಯಿಂದ ಊರಿಗೆ ಮರಳಿದ್ದರು. ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿರುವ ಪತ್ನಿಯನ್ನು ಅವರ ತಂದೆ, ತಾಯಿ ಬಳಿ ಬಿಟ್ಟು ಶಿವಕುಮಾರ್ ತನ್ನ ಸಂಬಂಧಿಕನ ತಾಯಿಯನ್ನು ಕಾಣ ಲೆಂದು ಮಕ್ಕಳೊಂದಿಗೆ ಬೆಂಗಳೂರಿಗೆ ಸ್ವಂತ ಕಾರಿನಲ್ಲಿ ಶನಿವಾರ ತೆರಳಿದ್ದರು. ಬೆಂಗಳೂರಿನಲ್ಲಿ ಒಂದು ದಿನ ಉಳಿದು ಬಳಿಕ ಕೊಲ್ಲೂರಿಗೆ ಹೋಗಿದ್ದರು. ಮೂವರೂ ಕ್ಷೇತ್ರದ ಮುಂಭಾಗ ನಿಂತು ಸೆಲ್ಫಿ ತೆಗೆದ ಚಿತ್ರವನ್ನು ಅವರು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಅನಂತರ ಮನೆಗೆ ತೆರಳುತ್ತಿದ್ದ ವೇಳೆ ದಾರುಣ ಘಟನೆ ಸಂಭವಿಸಿದೆ.
ದುರಂತ ವಿಷಯ ತಿಳಿದು ಸಂಬಂಧಿಕರು ಕಾಸರಗೋಡಿಗೆ ಆಗಮಿಸಿದ್ದಾರೆ. ಶರತ್‌ರ ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ, ಶಿವಕುಮಾರ್ ಹಾಗೂ ಸೌರವ್‌ರ ಮೃತ ದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.ದಿ| ವೇಲಾ ಯುಧನ್ ಮೆನೋನ್ ಎಂಬವರ ಪುತ್ರನಾದ ಶಿವಕು ಮಾರ್ ತಾಯಿ ಶಾಂತ ಕುಮಾರಿ, ಪತ್ನಿ ಸ್ಮಿತಾ, ಸಹೋದರ ಭರತ್‌ರಾಜ್, ಸಹೋದರಿ ಯರಾದ ಗೀತಾ, ಶೋಭನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.