ಕುಂಬಳೆಯಲ್ಲಿ ರಸ್ತೆ ಬದಿ ಟ್ರಾನ್ಸ್‌ಫಾರ್ಮರ್‌ನಿಂದ ಅಪಾಯ ಭೀತಿ

ಕುಂಬಳೆ: ಕುಂಬಳೆಯಲ್ಲಿ ಕೆಎಸ್‌ಇಬಿ ಅಧಿಕಾರಿಗಳು ಇತ್ತೀಚೆಗೆ ನಿರ್ಮಿಸಿದ ಟ್ರಾನ್ಸ್‌ಫಾರ್ಮರ್ ವೊಂದು ಅಪಾಯ ಭೀತಿ ಹುಟ್ಟಿಸುತ್ತಿದೆ. ಕುಂಬಳೆ ಪೇಟೆಯಲ್ಲಿ ಬದರ್ ಜುಮಾ ಮಸೀದಿ ಮುಂಭಾಗ ಸರ್ವಿಸ್ ರಸ್ತೆ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ನಿಂದ ಆತಂಕ ಹುಟ್ಟಿಕೊಂಡಿದೆ. ಸರ್ವಿಸ್ ರಸ್ತೆಯಲ್ಲಿ ಸಾರ್ವಜನಿಕರಿಗೆ ನಡೆದು ಹೋಗಲು ನಿರ್ಮಿಸಿದ ಫೂಟ್‌ಪಾತ್‌ಗೆ ಸಮೀಪದಲ್ಲೇ ಟ್ರಾನ್ಸ್‌ಫಾರ್ಮರ್ ಇದ್ದು, ಅದರ ಮತ್ತೊಂದು ಬದಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಇದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸುವಾಗ ತಾತ್ಕಾಲಿಕ ಎಂಬ ನೆಲೆಯಲ್ಲಿ ಈ ಟ್ರಾನ್ಸ್‌ಫಾರ್ಮರ್ ಇಲ್ಲಿ ಸ್ಥಾಪಿಸಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದೀಗ ಅದು ಇಲ್ಲಿ ಶಾಶ್ವತವಾಗಿದೆ. ರೈಲು ನಿಲ್ದಾಣದಿಂದ ಪೇಟೆಗೆ ಬರುವವರು ಈ ಟ್ರಾನ್ಸ್‌ಫಾರ್ಮರ್ ಬದಿಯಲ್ಲಾಗಿ ನಡೆದು ಹೋಗಬೇಕು. ಟ್ರಾನ್ಸ್‌ಫಾರ್ರ‍್‌ಗೆ ಆವರಣ ಬೇಲಿ ಕೂಡಾ ನಿರ್ಮಿಸದೆ ಇರುವುದು ಅಪಾಯಭೀತಿ ಹೆಚ್ಚಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಶಾಲೆ ಆರಂಭಗೊಳ್ಳಲಿದ್ದು, ಅಷ್ಟರಲ್ಲಿ ಈ ಭಾಗದಿಂದ ಮಕ್ಕಳ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ದಾರಿಯಲ್ಲಾಗಿ ನಡೆದು ಹೋಗಲಿದ್ದಾರೆ.

ರಸ್ತೆಯ ಬದಿಯಲ್ಲೇ ಯಾವುದೇ ಭದ್ರತೆ ಇಲ್ಲದೆ ಸ್ಥಾಪಿಸಲಾದ ಈ ಟ್ರಾನ್ಸ್‌ಫಾರ್ಮರ್‌ನಿಂದ ಅಪಾಯ ಸಂಭವಿಸುವ ಮೊದಲು ಇದನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page