ಕುಂಬಳೆಯಿಂದ ಕಳವಿಗೀಡಾದ ಬೈಕ್‌ನ ಚಿತ್ರ ಎಐ ಕ್ಯಾಮರಾದಲ್ಲಿ ಪತ್ತೆ: ದಂಡ ಪಾವತಿಸುವಂತೆ ಮಾಲಕನಿಗೆ ನೋಟೀಸು
ಕುಂಬಳೆ: ಮದುವೆ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವಿಗೀಡಾದ ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕುಂಬಳೆ ಪೈ ಕಂಪೌಂಡ್‌ನ ಸಚಿನ್ ಎಂಬವರ ಪಲ್ಸರ್ ಬೈಕ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ನವಂಬರ್ ೩ರಂದು ಸಚಿನ್‌ರ ಸಹೋದರಿಯ ಮದುವೆ ನಡೆದಿತ್ತು. ಅಂಗಳಕ್ಕೆ ಚಪ್ಪರ ಹಾಕಿದುದರಿಂದ 2ರಂದು ರಾತ್ರಿ ಮನೆಯಿಂದ ಅಲ್ಪ ದೂರದಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಅದೇ ಸ್ಥಳದಲ್ಲಿ ಇತರ ನಾಲ್ಕು ಬೈಕ್‌ಗಳೂ ಇದ್ದವು. ೩ರಂದು ಮುಂಜಾನೆ ಸಚಿನ್‌ರ ಬೈಕ್ ಕಳವಿಗೀಡಾದ ವಿಷಯ ತಿಳಿದುಬಂದಿದೆ. ಈ ಬಗ್ಗೆ ಅದೇ ದಿನ ಪೊಲೀ ಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ಪಾವತಿಸುವಂತೆ ತಿಳಿಸಿ ಸಚಿನ್‌ರಿಗೆ ಆರ್‌ಟಿಒ ಕಚೇರಿಯಿಂದ ನೋಟೀಸು ಲಭಿಸಿದೆ. ನವಂಬರ್ 3ರಂದು ಮುಂಜಾನೆ 1.50ರ ವೇಳೆ ಬೈಕ್ ಕಾಞಂಗಾಡ್ ಮೂಲಕ ಸಂಚರಿಸಿರುವುದಾಗಿಯೂ ಅದರಲ್ಲಿದ್ದ ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲವೆನ್ನಲಾಗಿದೆ. ಈ ದೃಶ್ಯ ಅಲ್ಲಿನ ಎ.ಐ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರಂತೆ ಬೈಕ್‌ನ ಮಾಲಕ 1000 ರೂಪಾಯಿ ದಂಡ ಪಾವತಿಸಬೇಕೆಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ. ಈ ನೋಟೀಸ್‌ನ ಪ್ರತಿಯನ್ನು ದೂರುಗಾರ ಪೊಲೀಸರಿಗೆ ನೀಡಿದ್ದಾರೆ. ನೋಟೀಸ್‌ನಲ್ಲಿರುವ ಚಿತ್ರದಲ್ಲಿ ಕಾಣುವ ವ್ಯಕ್ತಿಗಳ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.