ಕುಂಬಳೆ ಕೆಳ ಸೇತುವೆಯಲ್ಲಿ ನೀರು ತುಂಬಿಕೊಂಡು ಸಾರಿಗೆ ಅಡಚಣೆ: ನಾಗರಿಕರು, ಆಟೋ ಚಾಲಕರಿಂದ ಪಂಚಾಯತ್‌ಗೆ ದೂರು
ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದ ಕೆಳ ಸೇತುವೆಯೊಳಗೆ ನೀರು ತುಂಬಿಕೊಂಡು ಆ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರಿಂದ ಸಮಸ್ಯೆಗೀಡಾದ ನಾಗರಿಕರು ಹಾಗೂ ಆಟೋ ಚಾಲಕರು ದೂರಿನೊಂದಿಗೆ ಕುಂಬಳೆ ಗ್ರಾಮ ಪಂಚಾಯತ್ ಕಚೇರಿಗೆ ತಲುಪಿ ಅಧಿಕಾರಿಗಳಲ್ಲಿ ತಮ್ಮ ಅಹವಾಲು ಸಲ್ಲಿಸಿದರು.
ಕುಂಬಳೆ ರೈಲ್ವೇ ನಿಲ್ದಾಣ ಲೆವೆಲ್ ಕ್ರಾಸ್ ಮುಚ್ಚುಗಡೆಗೊಳಿಸಿದ ಬಳಿಕ ವರ್ಷಗಳ ಹಿಂದೆ ಕೆಳ ಸೇತುವೆ ಸೌಕರ್ಯ ಏರ್ಪಡಿಸಲಾಗಿತ್ತು. ಆದರೆ ಪ್ರತೀ ವರ್ಷ ಮಳೆಗಾಲದಲ್ಲಿ ಅದರೊಳಗೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡಚಣೆ ಎದುರಾಗುತ್ತಿದೆ. ಕುಂಬಳೆ ಕೊಯಿಪ್ಪಾಡಿ, ಪೆರುವಾಡು ಪ್ರದೇಶದ ವಿದ್ಯಾರ್ಥಿಗಳು, ಮೀನು ಕಾರ್ಮಿಕರ ಸಹಿತ ನೂರಾರು ಮಂದಿಗೆ ಕುಂಬಳೆ ಪೇಟೆಗೆ ತಲುಪಬೇಕಾದರೆ ಈ ಕೆಳ ಸೇತುವೆ ಮೂಲಕ ಸಂಚರಿಸಬೇಕು. ಈ ಸಮಸ್ಯೆಗೆ ತುರ್ತಾಗಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾಗರಿಕರು ಹಾಗೂ ಆಟೋ ಚಾಲಕರು ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ತುರ್ತು ಪರಿಹಾರ ವೆಂಬ ನೆಲೆಯಲ್ಲಿ ಕುಂಬಳೆಯ ರೈಲ್ವೇ ಕೆಳ ಸೇತುವೆ ಯಲ್ಲಿ ಮೋಟಾರ್ ಅಳವಡಿಸಿ ನೀರನ್ನು ಹೊರಹಾ ಕಲಿರುವ ವ್ಯವಸ್ಥೆಯನ್ನು ಪಂಚಾಯತ್ ಏರ್ಪಡಿಸಿದೆ.