ಕುಂಬಳೆ ಪೇಟೆಯಲ್ಲಿ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿ, ಡೀಸೆಲ್, ಟರ್ಪಾಲು ಕಳವು
ಕುಂಬಳೆ: ಕುಂಬಳೆ ಪೇಟೆಯಲ್ಲಿ ನಿಲ್ಲಿಸಿದ್ದ ಲಾರಿಯಿಂದ 2 ಬ್ಯಾಟರಿ, 350 ಲೀಟರ್ ಡೀಸೆಲ್ ಹಾಗೂ ಎರಡು ಟರ್ಪಾಲುಗಳನ್ನು ಕಳವು ನಡೆಸಲಾಗಿದೆ. ಈ ಬಗ್ಗೆ ಲಾರಿ ಚಾಲಕ ಕಣ್ಣೂರು ಕೂತುಪರಂಬ ನಿವಾಸಿ ಸಂದೀಪ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತೃಶೂರಿನಿಂದ ಸಾಬೂನು ಲೋಡ್ ಉಪ್ಪಳಕ್ಕೆ ತಲುಪಿಸಿ ಇಳಿಸಿದ ಬಳಿಕ ಲಾರಿಯನ್ನು ಕುಂಬಳೆ ಬಸ್ ನಿಲ್ದಾಣ ಸಮೀಪದ ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಲಾಗಿತ್ತು. ನಿನ್ನೆ ಕುಂಬಳೆಯಿಂದ ತೃಶೂರಿಗೆ ಸರಕು ಸಾಗಾಟ ನಡೆಸಲಿದ್ದುದರಿಂದ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಚಾಲಕ ಸಂದೀಪ್ ಊರಿಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಕುಂಬಳೆಗೆ ಅವರು ಮರಳಿ ತಲುಪಿದಾಗ ಲಾರಿಯ ಬ್ಯಾಟರಿ ಮೊದಲಾದವು ಕಳವಿಗೀಡಾದ ಬಗ್ಗೆ ಅರಿವಿಗೆ ಬಂದಿದೆ. ಒಟ್ಟು 1.10 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.