ಕುಂಬಳೆ ಬಸ್ ನಿಲ್ದಾಣ ಪ್ರವೇಶಿಸದ ಬಸ್‌ಗಳು: ಹೆದ್ದಾರಿಯಲ್ಲಿ ಇಳಿದು ರಸ್ತೆ ದಾಟುವ ಪ್ರಯಾಣಿಕರು; ಅಪಾಯ ಭೀತಿ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರಗೋಡಿನಿಂದ ತಲಪಾಡಿ ಭಾಗಕ್ಕೆ ತೆರಳುವ ಬಸ್‌ಗಳು ಇಂದು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಕಾಸರಗೋಡು ಭಾಗದಿಂದ ತಲಪಾಡಿ ಭಾಗಕ್ಕೆ ತೆರಳುವ ಬಸ್‌ಗಳು  ಕುಂಬಳೆ ದೇವಿನಗರ ಸರ್ವೀಸ್ ರಸ್ತೆ ಮೂಲಕ ಅಂಡರ್ ಪ್ಯಾಸೇಜ್‌ನಲ್ಲಾಗಿ ಕುಂಬಳೆ ಬಸ್ ನಿಲ್ದಾಣಕ್ಕೆ ತೆರಳಬೇಕೆಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಅಂಡರ್ ಪ್ಯಾಸೇಜ್ ಮೂಲಕ ಕುಂಬಳೆ ಪೇಟೆಗೆ ತೆರಳುವುದು ವಿರುದ್ಧ ದಿಶೆಯಲ್ಲಾದುದರಿಂದ ಎದುರಿನಿಂದ ಬರುವ ವಾಹನಗಳಿಗೆ ಸೈಡ್ ನೀಡಲು ಸಮಸ್ಯೆ ಎದುರಾಗುತ್ತಿದೆ.

ಈ ಕಾರಣದಿಂದ ಇಂದು ಕಾಸರಗೋಡಿನಿಂದ ತಲಪಾಡಿ ಭಾಗಕ್ಕೆ ತೆರಳುವ ಯಾವುದೇ ಬಸ್‌ಗಳು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸದೆ ನೇರವಾಗಿ ಹೆದ್ದಾರಿ ಮೂಲಕವೇ ಸಂಚರಿಸುತ್ತಿವೆ. ಇದರಿಂದ ಕುಂಬಳೆಯಲ್ಲಿ ಇಳಿಯಬೇಕಾದ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಳಿದು   ರಸ್ತೆ ದಾಟಬೇಕಾಗಿ ಬಂದಿದೆ. ಇದರಿಂದ  ಅಪಾಯ ಭೀತಿಯೂ ಎದುರಾಗಿದೆ. ಇದೇ ವೇಳೆ ತಲಪಾಡಿ ಭಾಗದಿಂದ ಬರುವ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸುತ್ತಿವೆ. ಕಾಸರಗೋಡು ಭಾಗದಿಂದ ಬರುವ ಬಸ್‌ಗಳನ್ನು ಕುಂಬಳೆ ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಬೇಕಾದ ವ್ಯವಸ್ಥೆ ಕಲ್ಪಿಸಿ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

You cannot copy contents of this page