ಕೇಂದ್ರ ಸಚಿವ ಅಮಿತ್ ಷಾ ಇಂದು ರಾಜ್ಯಕ್ಕೆ : ಬಿಜೆಪಿ ಸ್ಥಳೀಯಾಡಳಿತ ಚುನಾವಣೆ ಪ್ರಚಾರಕ್ಕೆ ನಾಳೆ ಚಾಲನೆ

ತಿರುವನಂತಪುರ: ಬಿಜೆಪಿಯ ಸ್ಥಳೀಯಾಡಳಿತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಕೇರಳಕ್ಕೆ ತಲುಪಲಿದ್ದಾರೆ. ರಾತ್ರಿ 11 ಗಂಟೆಗೆ ತಿರುವನಂತಪುರಕ್ಕೆ ತಲುಪುವ ಅಮಿತ್ ಷಾ ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬಿಜೆಪಿ ರಾಜ್ಯ ಸಮಿತಿ ಕಚೇರಿಯ ಉದ್ಘಾಟನೆಯನ್ನು ಅವರು ನಿರ್ವಹಿಸುವರು. ಬಳಿಕ ಪುತ್ತರಿಕಂಡಂ ಮೈದಾನದಲ್ಲಿ ನಡೆಯುವ ವಾರ್ಡ್ ಮಟ್ಟದ ನಾಯಕತ್ವ ಸಭೆಯಲ್ಲಿ ಚುನಾವಣೆಯಲ್ಲಿ ಮುನ್ನಡೆ ಸಾಧಿಸುವ ಗುರಿಯೊಂದಿಗೆ ಕೇರಳ ಮಿಷನ್ 2025 ಘೋಷಿಸುವರು. ಇದರೊಂದಿಗೆ ಚುನಾವಣೆಯ ಸಂಘಟನಾ ಮಟ್ಟದ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ಲಭಿಸಲಿದೆ. ಆಲಪ್ಪುಳ, ಕೊಲ್ಲಂ, ಪತ್ತನಂತಿಟ್ಟ, ತಿರುವನಂತಪುರ ಜಿಲ್ಲೆಗಳ 5000 ವಾರ್ಡ್ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ಬಾಕಿ 10 ಜಿಲ್ಲೆಗಳ ವಾರ್ಡ್ ಪ್ರತಿನಿಧಿಗಳು ಪಂಚಾಯತ್ ಮಟ್ಟದಲ್ಲಿ ವರ್ಚುವಲ್ ಕ್ಯೂ ಮೂಲಕ ಏಕ ಕಾಲದಲ್ಲಿ ಸಭೆಯಲ್ಲಿ ಭಾಗವಹಿಸುವರು. ಸ್ಥಳೀಯಾಡಳಿತ ಚುನಾವಣೆಯಲ್ಲಿ ತಿರುವನಂತಪುರ ಹಾಗೂ ತೃಶೂರ್ ಕಾರ್ಪೊರೇಷನ್ ಗಳಲ್ಲಿ ಗೆಲುವು ಸಾಧಿಸಿ ಆಡಳಿತವನ್ನು ಕೈಗೆತ್ತಿಕೊಳ್ಳಲು ಬಿಜೆಪಿ ಗುರಿಯಿರಿಸಿದೆ. ೪೦೦ ಪಂಚಾಯತ್‌ಗಳಲ್ಲಿ ಹಾಗೂ 25 ನಗರಸಭೆಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ. ರಾಜ್ಯದಲ್ಲಿ ಒಟ್ಟು 10,000 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿರುವ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿದೆ. ಪ್ರಸ್ತುತ ಪಾಲಕ್ಕಾಡ್, ಪಂದಳ ನಗರಸಭೆಗಳು ಹಾಗೂ 19 ಪಂಚಾಯತ್‌ಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಅದೇ ರೀತಿ 1600ರಷ್ಟು ವಾರ್ಡ್‌ಗಳನ್ನು ಬಿಜೆಪಿ ಸದಸ್ಯರು ಪ್ರತಿನಿಧೀಕರಿಸುತ್ತಿದ್ದಾರೆ.

ನಾಳೆ ಸಂಜೆ ಅಮಿತ್ ಷಾ ತಿರುವನಂತಪುರದಿಂದ ಕಣ್ಣೂರಿನ ತಳಿಪರಂಬ ಶ್ರೀ ರಾಜರಾಜೇಶ್ವರ ಕ್ಷೇತ್ರಕ್ಕೆ ಆಗಮಿಸುವರು. ಸಂಜೆ ೪ಕ್ಕೆ ಕಣೂರು ವಿಮಾನ ನಿಲ್ದಾಣಕ್ಕೆ ತಲುಪುವ ಅವರು ಅಲ್ಲಿಂದ ರಸ್ತೆ ಮೂಲಕ ತಳಿಪರಂಬಕ್ಕೆ ತಲುಪಿ ಕ್ಷೇತ್ರ ದರ್ಶನ ನಡೆಸಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page