ಕೊಡಗಿನಲ್ಲಿ ಕುತ್ತಿಗೆ ಕಡಿದು ವಿದ್ಯಾರ್ಥಿನಿಯ ಕೊಲೆ: ಆರೋಪಿ ಪೊಲೀಸರ ಕಸ್ಟಡಿಯಲ್ಲಿ
ಮಡಿಕೇರಿ: ಸೋಮವಾರಪೇಟೆ ತಾಲೂಕಿನಲ್ಲಿ ಬಾಲಕಿಯನ್ನು ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಮೊನ್ನಂಡ ಪ್ರಕಾಶ್ (33) ಎಂಬಾತನನ್ನು ಸೆರೆಹಿಡಿಯಲಾಗಿದೆ.
ಮೊನ್ನೆ ರಾತ್ರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೀನಾರನ್ನು ಈತ ಕೊಲೆಗೈದು ಪರಾರಿಯಾಗಿದ್ದನು. ಬಳಿಕ ಮನೆ ಬಳಿಯಲ್ಲೇ ಈತ ನೇಣು ಬಿಗಿದು ಆತ್ಮಹತ್ಯೆಗೈದಿ ದ್ದಾನೆಂದು ವರದಿಯಾಗಿತ್ತು. ಆದರೆ ಇದು ಸುಳ್ಳು ಪ್ರಚಾರವೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಹಗಲು ರಾತ್ರಿ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ಮನೆ ಸಮೀಪದ ಕಾಡಿನಲ್ಲಿ ಈತ ಅವಿತುಕೊಂಡಿದ್ದ ಮಾಹಿತಿ ಲಭಿಸಿದ್ದು, ಇಂದು ಬೆಳಿಗ್ಗೆ ಆತನನ್ನು ಬಂಧಿಸಿದ್ದಾರೆ. ಬಾಲಕಿಯ ರುಂಡದ ಬಗ್ಗೆ ಇನ್ನಷ್ಟೇ ಮಾಹಿತಿ ಲಭಿಸಬೇಕಾಗಿದೆಯೆಂದು ಅವರು ತಿಳಿಸಿದ್ದಾರೆ.
ಸೂರ್ಲಂಬಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೀನಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಸಂಭ್ರಮದಲ್ಲಿರುವಂತೆ ಈಕೆಯ ವಿವಾಹ ಪ್ರಕಾಶ್‌ನೊಂದಿಗೆ ನಡೆಸಲು ಮನೆಯವರು ಸಿದ್ಧತೆ ನಡೆಸಿದ್ದರು. ಇದನ್ನು ತಿಳಿದು ತಲುಪಿದ ಅಧಿಕಾರಿಗಳು ಅಪ್ರಾಪ್ತ ವಯಸ್ಸಿನವಳಾದ ಕಾರಣ ವಿವಾಹ ನಿಶ್ಚಯವನ್ನು ರದ್ದುಗೊಳಿಸಿದ್ದರು. ಇದರಿಂದ ಕೆರಳಿದ ಪ್ರಕಾಶ್ ಬಾಲಕಿಯ ಮನೆಗೆ ತೆರಳಿ ತಂದೆ ತಾಯಿಗೆ ಹಲ್ಲೆ ನಡೆಸಿ ಮೀನಾಳನ್ನು ಎಳೆದುಕೊಂಡು ಹೋಗಿ ಕುತ್ತಿಗೆ ಕಡಿದು ಕೊಲೆಗೈದಿದ್ದಾನೆ. ಬಳಿಕ ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ನಿನ್ನೆ ಈತ ಮನೆ ಬಳಿ ಆತ್ಮಹತ್ಯೆಗೈದಿರುವುದಾಗಿ ಸುದ್ದಿ ಹಬ್ಬಿದ್ದು, ಆದರೆ ಇದು ಸುಳ್ಳೆಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ತನಿಖೆ ನಡೆಸಲಾಗುತ್ತಿದೆ.