ಕೊಲ್ಲಂ ನಿವಾಸಿ ಬ್ರಹ್ಮಾವರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವು: ಇಬ್ಬರು ಪೊಲೀಸರ ಅಮಾನತು
ಮಂಗಳೂರು: ಕೇರಳದ ಕೊಲ್ಲಂ ನಿವಾಸಿಯುವಕ ಬ್ರಹ್ಮಾವರದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾ ಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಧು, ಎಸ್.ಎಚ್.ಒ ಸುಜಾತ ಎಂಬಿವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೊಲ್ಲಂ ನಿವಾಸಿ ಬಿಜು ಮೋನ್ (42) ಎಂಬವರು ಕಳೆದ ಆದಿತ್ಯವಾರ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದರು. ಬಿಜುಮೋನ್ ಹಲವು ವರ್ಷಗಳಿಂದ ಬ್ರಹ್ಮಾವರದ ಶಿಪ್‌ಯಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಅಪರಿಚಿತರಾದ ಓರ್ವ ಮಹಿಳೆ ಹಾಗೂ ಆಕೆಯ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದರೆಂಬ ಆರೋಪದಂತೆ ಬಿಜುಮೋನ್‌ರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದರು. ಆದಿತ್ಯವಾರ ಮುಂಜಾನೆ 3.45ರ ವೇಳೆ ಬಿಜುಮೋನ್ ಅರೆ ಪ್ರಜ್ಞಾವಸ್ಥೆಯಲ್ಲಿ ಕಂಡು ಬಂದಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರೊಳಗೆ ಸಾವು ಸಂಭವಿಸಿತ್ತೆನ್ನಲಾಗಿದೆ. ಇದೇ ವೇಳೆ ಬಿಜುಮೋನ್‌ಗೆ ನಾಗರಿಕರು ಹಾಗೂ ಪೊಲೀಸರು ಹಲ್ಲೆಗೈದಿದ್ದಾರೆಂಬ ಆರೋಪವೂ ಉಂಟಾಗಿದೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.