ಕ್ರಿಸ್ಮಸ್: ತೀವ್ರಗೊಂಡ ಅಬಕಾರಿ ಕಾರ್ಯಾಚರಣೆ; ಹುಳಿರಸ, ಕಳ್ಳಭಟ್ಟಿ ವಶ
ಕಾಸರಗೋಡು: ಕ್ರಿಸ್ಮಸ್ ಹಬ್ಬ ಇನ್ನೇನೂ ಸಮೀಪಿಸುತ್ತಿರುವಂತೆಯೇ ಈ ಸಂದರ್ಭದಲ್ಲಿ ಜಿಲ್ಲೆಗೆ ಹೊರಗಿನಿಂದ ಅಕ್ರಮ ಮದ್ಯ ಸಾಗಾಟ ಹಾಗೂ ಕಳ್ಳಭಟ್ಟಿ ಸಾರಾಯಿ ನಿರ್ಮಾಣ ಹೆಚ್ಚುತ್ತಿರುವ ಸಾಧ್ಯತೆಯನ್ನು ಪರಿಗಣಿಸಿ ಅದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಈಗಾಗಲೇ ಬಿಗಿ ಕಾರ್ಯಾಚರಣೆ ಆರಂಭಿಸಿದೆ.
ಇದರಂತೆ ವೆಳ್ಳರಿಕುಂಡ್ ಎ ಮಾಲೋಂ ಗ್ರಾಮದ ಪಡಯಂಕಲ್ಲಿನಲ್ಲಿ ನೀಲೇಶ್ವರ ಎಕ್ಸೈಸ್ ರೇಂಜ್‌ನ ಪ್ರಿವೆಂಟೀವ್ ಆಫೀಸರ್ ಹರೀಂದ್ರನ್ ಪಿ.ಎ.ರ ನೇತೃತ್ವದಲ್ಲಿ ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 50 ಲೀಟರ್ ಹುಳಿರಸ (ವಾಶ್) ಮತ್ತು ಎರಡು ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಲಾಗಿದೆ. ಆದರೆ ಅದನ್ನು ಅಲ್ಲಿ ಬಚ್ಚಿಟ್ಟವರ ಬಗ್ಗೆ ಮಾಹಿತಿ ಲಭಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ಗೆ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ.ರ ನೇತೃತ್ವದ ಅಬಕಾರಿ ತಂಡ ಕಾಸರಗೋಡು ಕರಂದಕ್ಕಾಡ್‌ನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 4.32 ಲೀಟರ್ (180 ಎಂಎಲ್‌ನ 24 ಟೆಟ್ರಾ ಪ್ಯಾಕೆಟ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಬೆದ್ರಡ್ಕದ ಮನೋಜ್ ಕುಮಾರ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್, ಪ್ರಿವೆಂಟಿವ್ ಆಫೀಸರ್ ನೌಶಾದ್, ಸಿ.ಇ.ಒ. ಅತುಲ್ ಎಂಬವರು ಒಳಗೊಂಡಿದ್ದರು.