ಖೋಟಾನೋಟುಗಳ ಸಹಿತ ಮಂಜೇಶ್ವರ ನಿವಾಸಿ ಮಂಗಳೂರಿನಲ್ಲಿ ಸೆರೆ

ಮಂಗಳೂರು: ಖೋಟಾನೋಟುಗಳ ಸಹಿತ ಮಂಜೇಶ್ವರ ನಿವಾಸಿಯೋರ್ವ ಮಂಗಳೂರಿನಲ್ಲಿ ಸೆರೆಗೀಡಾಗಿದ್ದಾನೆ. ಮಂಜೇಶ್ವರ, ಕೀರ್ತೇಶ್ವರ ಆಬುಪಡ್ಪುವಿನ ಪ್ರಶ್ವಿತ್ (೨೫) ಎಂಬಾತನನ್ನು ಕಂಕನಾಡಿಯಿಂದ ಸಿಟಿ ಕ್ರೈಂಬ್ರಾಂಚ್ ಪೊಲೀಸರು ಸೆರೆ ಹಿಡಿದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲರಿಗೆ ಲಭಿಸಿದ ಗುಪ್ತ ಮಾಹಿತಿ ಹಿನ್ನೆಲೆಯಲ್ಲಿ ಡಿ.ಸಿ.ಪಿ ಸಿದ್ಧಾರ್ಥ್ ಗೋಯಲ್‌ರ ನೇತೃತ್ವದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಪ್ರಶ್ವಿತ್‌ನ ಕೈಯಿಂದ ೫೦೦ ರೂಪಾಯಿಗಳ ಮೂರು, ೨೦೦ ರೂಪಾಯಿಗಳ ಎರಡು, ೧೦೦ ರೂಪಾಯಿಗಳ ಮೂರು ಖೋಟಾನೋಟುಗಳನ್ನು ವಶಪಡಿಸಲಾಗಿದೆ. ೪೨೫೦ ರೂಪಾಯಿಯ ಅಸಲಿ ನೋಟುಗಳು ಹಾಗೂ ಮೊಬೈಲ್ ಪೋನ್‌ನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ೯೦೦೦ ರೂಪಾಯಿ ಮೌಲ್ಯದ ಖೋಟಾನೋಟುಗಳನ್ನು ಹಸ್ತಾಂತರಿಸಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆಯೊಂದರಲ್ಲಿ ಖೋಟಾನೋಟುಗಳನ್ನು ತಯಾರಿಸಲಾಗಿದೆಯೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಆ ಮನೆಯನ್ನು ಪತ್ತೆಹಚ್ಚಲಿರುವ ಕ್ರಮವನ್ನು ಪೊಲೀಸರು ಆರಂಭಿಸಿದ್ದಾರೆ.

You cannot copy contents of this page