ಗಡಿ ಭಾಗಗಳಲ್ಲಿ ಮಲೆಯಾಳೀಕರಣಗೊಳ್ಳುತ್ತಿರುವ ಕನ್ನಡ ಸ್ಥಳ ನಾಮಗಳು: ವರದಿ ನೀಡಲು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಸೂಚನೆ

ಬೆಂಗಳೂರು: ಹೊರನಾಡ ಕನ್ನಡಿಗರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ನಿನ್ನೆ ಕರ್ನಾಟಕ ವಿಧಾನಸೌಧದಲ್ಲಿ ಚರ್ಚೆ ನಡೆಸಲಾಯಿತು. ಕೇರಳದಲ್ಲಿ ಕೇರಳದ ಗಡಿಭಾಗದಲ್ಲಿ ಕನ್ನಡ ಪ್ರದೇಶಗಳ ಹೆಸರುಗಳನ್ನು ಮಲೆಯಾಳೀಕರಣಗೊಳಿಸುತ್ತಿರುವ ಬಗ್ಗೆ ಕಾನೂನಾತ್ಮಕ ಅವಕಾಶಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸಭೆಯಲ್ಲಿ ಸರಕಾರದ ಮುಖ್ಯಮಂತ್ರಿ ಕಾರ್ಯದರ್ಶಿ ಶಾಲಿನಿ ರಜಿನೀಶ್ ಅವರು ಸಂಸದೀಯ ವ್ಯವಹಾರಗಳ ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಒಂದೊಂದು ಇಲಾಖೆಗೆ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಿ ಗಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಸೂಚನೆ ನೀಡಿದರು. ಕರ್ನಾಟಕ ಸರಕಾರದಿಂದ ಹೊರರಾಜ್ಯ ಕನ್ನಡಿಗರಿಗೆ ನೀಡುವ ಸವಲತ್ತುಗಳ ಬಗ್ಗೆ ಹೊರರಾಜ್ಯಗಳಲ್ಲಿ ವ್ಯಾಪಕ ಪ್ರಚಾರ ನಡೆಸುವಂತೆ ಕಾರ್ಯದರ್ಶಿ ಸೂಚಿಸಿದರು. ಪ್ರತೀ ಗಡಿ ಜಿಲ್ಲೆಯಲ್ಲೂ ಕೆಡಿಪಿ ಸಭೆ ನಡೆಸಿ ಗಡಿ ಸಮಸ್ಯೆಗಳ ವಿಷಯಗಳನ್ನು ಗಂಭೀರವಾಗಿ ಚರ್ಚಿಸುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದರು. ಈ ಸಭೆಗಳಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ವಿಶೇಷ ಆಹ್ವಾನಿತರಾಗಿ ಆಮಂತ್ರಿಸುವಂತೆ ಅವರು ಸೂಚಿಸಿದರು.

ಹೊರರಾಜ್ಯಗಳಲ್ಲಿ ೬೫೮ ಕನ್ನಡ ಮಾಧ್ಯಮ ಶಾಲೆಗಳಿದ್ದು, ಇಲ್ಲಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿದಮರದ ತಿಳಿಸಿದರು. ಹೊರರಾಜ್ಯದ ಶಾಲೆಗಳಲ್ಲಿ ಶಿಕ್ಷಕರ ನೇಮಕಗೊಳಿಸಲು ಸರಕಾರ ಮುಂದಾಗಬೇಕೆಂದು, ಆ ಭಾಗದ ವಿದ್ಯಾರ್ಥಿಗಳಿಗೆ ಮೊರಾರ್ಜಿ, ರಾಣಿ ಚೆನ್ನಮ್ಮ ವಸತಿ ನಿಲಯಗಳಿಗೆ ಪ್ರವೇಶಾತಿ ನೀಡಬೇಕೆಂದು ಆಗ್ರಹಿಸಿದರು. ರಾಜ್ಯದ ವಿದ್ಯಾರ್ಥಿಗಳಿಗಿರುವ ಎಲ್ಲಾ ಸವಲತ್ತುಗಳನ್ನು ಉನ್ನತ ಶಿಕ್ಷಣ ಬಯಸುವ ಹೊರನಾಡ ವಿದ್ಯಾರ್ಥಿಗಳಿಗೂ ನೀಡಬೇಕೆಂದು ಅವರು ಆಗ್ರಹಿಸಿದರು. ರಾಜ್ಯದ ಶಾಲಾ, ಕಾಲೇಜುಗಳಿಗೆ ಬರುವ ಹೊರನಾಡ ಕನ್ನಡ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳಲ್ಲಿ ರಿಯಾಯಿತಿ ನೀಡಬೇಕೆಂದು ಅವರು ಆಗ್ರಹಿಸಿದರು.

Leave a Reply

Your email address will not be published. Required fields are marked *

You cannot copy content of this page