ಗಾಂಜಾ ಸಾಗಾಟ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ
ಕಾಸರಗೋಡು: ಗಾಂಜಾ ಸಾಗಾಟ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯ ಅವರು ಎರಡು ವರ್ಷ ಸಜೆ ಹಾಗೂ 20,000 ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಚೆಂಗಳ ಮುಟ್ಟತ್ತೋಡಿ ತಾಯಲ್ ನಾಯಮ್ಮಾರ್‌ಮೂಲೆಯ ಫಾತಿಮ ಮಂಜಿಲ್‌ನ ಜುನೈದ್ ಎನ್.ಎಸ್.(29) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ೩ ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2017 ಅಕ್ಟೋಬರ್ 3೦ರಂದು ರಾತ್ರಿ 7.30ಕ್ಕೆ ಹೊಸದುರ್ಗ ಅರಿಮಲ ರೈಲ್ವೇ ಸ್ಟೇಷನ್ ರಸ್ತೆ ಬಳಿ ಬೈಕ್‌ನಲ್ಲಿ ಸಾಗಿಸುತ್ತಿದ್ದ 3 ಕಿಲೋ ಗಾಂಜಾವನ್ನು ಅಂದ ಹೊಸದುರ್ಗ ಎಸ್‌ಐ ಆಗಿದ್ದ ರಾಘವನ್ ಎನ್.ಪಿ. ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಜುನೈದ್ ಹಾಗೂ ಮೊಹಮ್ಮದ್ ಆಶಿಕ್ ಮತ್ತು ಅಬ್ದುಲ್ ನೌಶಾದ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಮೂವರು ಆರೋಪಿಗಳ ಪೈಕಿ ಮೊಹಮ್ಮದ್ ಆಶಿಕ್ ಮತ್ತು ಅಬ್ದುಲ್ ನೌಶಾದ್ ಜಾಮೀನು ಪಡೆದು ನಂತರ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ, ಅದರಿಂದಾಗಿ ಅವರಿಬ್ಬರ ಮೇಲಿನ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪ್ರತ್ಯೇಕಿಸಿ ಮುಂದೂಡಿದೆ. ಜುನೈದ್‌ನ ಮೇಲಿನ ಪ್ರಕರಣದ ವಿಚಾರಣೆ ಮಾತ್ರವೇ ನ್ಯಾಯಾಲಯದಲ್ಲಿ ನಡೆದಿದ್ದು, ಅದರಲ್ಲಿ ಆತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಶನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲಾ ಎಂಬವರು ನ್ಯಾಯಾಲಯದಲ್ಲಿ ವಾದಿಸಿದ್ದರು.