ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನ ವಶ: ಓರ್ವ ಸೆರೆ
ಕಾಸರಗೋಡು: ಗೂಡ್ಸ್ ಆಟೋ ದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿ ಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನೆಲ್ಲಿಕುಂಜೆ ಪಾದೂರು ಹೌಸಿನ ಉಮ್ಮರ್ ಫಾರೂಕ್ (೩೫) ಎಂಬಾತನನ್ನು ಚಂದೇರ ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ಸತೀಶನ್‌ರ ನೇತೃತ್ವದ ಪೊಲೀಸರ ತಂಡ ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದೆ. ಮೊನ್ನೆ ರಾತ್ರಿ ೯ ಗಂಟೆಗೆ ಕಾಲಿಕ್ಕಡವ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂದೇರ ಪೊಲೀಸ್ ಠಾಣೆಯ ಎಸ್‌ಐ ನೇತೃತ್ವದ ಪೊಲೀಸರು ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವೇಳೆ, ಆ ದಾರಿಯಾಗಿ ಕಾಸರಗೋಡಿನತ್ತ ಸಾಗುತ್ತಿದ್ದ ಗೂಡ್ಸ್ ಆಟೋವನ್ನು ತಡೆದು ನಿಲ್ಲಿಸಿ ಅದನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಏಳು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಾಗಿ ತುಂಬಿಸಿಡಲಾಗಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದಕ್ಕೆ ಸಂಬಂಧಿಸಿ ಮಾಲು ಮತ್ತು ಅದನ್ನು ಸಾಗಿಸುತ್ತಿದ್ದ ವಾಹನದ ಸಹಿತ ಉಮ್ಮರ್ ಫಾರೂಕ್‌ನನ್ನು ಪೊಲೀಸರು ವಶಕ್ಕೆ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.