ಚಿರತೆ ಭಯ ನೀಗಿಸಲು ಅರಣ್ಯ ಇಲಾಖೆಯಿಂದ ಬಿಗು ನಿಗಾ

ಬೋವಿಕ್ಕಾನ: ಬೋವಿಕ್ಕಾನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ರಾತ್ರಿ ತಪಾಸಣೆಯನ್ನು ತೀವ್ರಗೊಳಿಸಿದೆ. ಕಾರಡ್ಕ, ಮುಳಿಯಾರು, ದೇಲಂಪಾಡಿ, ಪುಲ್ಲೂರು-ಪೆರಿಯ, ಬೇಡಡ್ಕ, ಕುತ್ತಿಕ್ಕೋಲ್ ಪಂಚಾಯತ್‌ಗಳ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಚಿರತೆಯ ಭೀತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಾಗ್ರತೆ ಪಾಲಿಸುತ್ತಿದೆ.

ಕಳೆದ ಆಗಸ್ಟ್‌ನಿಂದ ವಿವಿಧ ಪಂಚಾಯತ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಆಕ್ರಮಿಸಿ ಕೊಂದ ಹಲವು ಪ್ರಕರಣಗಳು ವರದಿಯಾಗಿದ್ದು, ಮುಂದೆ ಈ ರೀತಿ ಸಂಭವಿಸದಂತೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡಿದ್ದಾರೆ. ಚಿರತೆ ಇರುವ ಸ್ಥಳವನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ವಿವಿಧ ಪ್ರದೇಶಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಿದೆ. ಕಾರಡ್ಕ, ಮುಳಿಯಾರು ಪಂಚಾಯತ್‌ಗಳಲ್ಲಿ ಸಾರ್ವಜನಿಕ ಜಾಗೃತಿ ಸಮಿತಿಗಳನ್ನು ರಚಿಸಲಾಗಿದೆ. ಎನ್‌ಟಿಸಿಎ ಮಾರ್ಗ ಸೂಚಿಗಳ ಪ್ರಕಾರ ತಜ್ಞರ ಸಮಿತಿಯನ್ನು ನೇಮಕಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಎರಡು ದೊಡ್ಡ ಗೂಡುಗಳನ್ನು ಸ್ಥಾಪಿಸಿ ನಿರೀಕ್ಷಿಸಲಾಗುತ್ತಿದೆ. ಚಿರತೆ ಭಯ ಪೀಡಿತ ಪ್ರದೇಶದಲ್ಲಿ ೧೭ ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ರಸ್ತೆಗೆ ತಾಗಿಕೊಂಡಿರುವ ಅರಣ್ಯ ಪ್ರದೇಶಗಳ ಗಿಡಗಳನ್ನು ಕಡಿದು ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.

ಬೋವಿಕ್ಕಾನದಲ್ಲಿ ಕ್ಷಿಪ್ರ ಕಾರ್ಯಪಡೆ ಹಗಲು-ರಾತ್ರಿ ನಿಗಾ ವಹಿಸುತ್ತಿದೆ. ಶಾಲಾ ಮಕ್ಕಳು ಸಂಚರಿಸುವ ಅರಣ್ಯ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಹೆಚ್ಚಿಸಲಾಗಿದೆ. ಕ್ಯಾಮರಾ ಬಲೆಗಳು, ದೀಪಗಳು, ಡ್ರೋನ್ ನಿರೀಕ್ಷಣೆ ಮೊದಲಾದವುಗಳನ್ನು ಬಳಸಿಕೊಂಡು ಚಿರತೆಯನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

RELATED NEWS

You cannot copy contents of this page