ಚಿರತೆ ಭೀತಿ ಮುಂದುವರಿಕೆ: ಇನ್ನೂ ಪತ್ತೆಯಾಗದ ತಪ್ಪಿಸಿಕೊಂಡ ಚಿರತೆ
ಕಾಸರಗೋಡು: ಕೊಳತ್ತೂರು ಮಡಂದಕ್ಕೋಡ್ ಗುಹೆಯಲ್ಲಿ ಕಂಡು ಬಂದ ಚಿರತೆ ಪರಾರಿಯಾದುದರೊಂದಿಗೆ ಸ್ಥಳೀಯರು ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ. ಮೊನ್ನೆ ಸಂಜೆ ಕಂಡು ಬಂದ ಚಿರತೆ ನಿನ್ನೆ ಬೆಳಿಗ್ಗೆ ಅಲ್ಲಿಂದ ಪರಾರಿಯಾಗಿತ್ತು. ಚಿರತೆ ಇಲ್ಲಿಂದ ಓಡಿ ಹೋಗದಿರಲು ಸ್ಥಳೀಯರು ಗುಹೆಯ ಮುಂಭಾಗದಲ್ಲಿ ಕಲ್ಲುಗಳನ್ನಿರಿಸಿದ್ದರು. ಚಿರತೆಗೆ ಔಷಧಿ ಗುಂಡು ಹೊಡೆಯಲು ಬೇಕಾಗಿ ಗುಹೆಯ ಮುಂಭಾಗದಲ್ಲಿದ್ದ ಕಲ್ಲನ್ನು ತೆರವುಗೊಳಿಸಿದಾಗ ಅಲ್ಲಿಂದ ಚಿರತೆ ಪರಾರಿಯಾಗಿದೆ ಎಂದು ಸ್ಥಳೀ ಯರು ತಿಳಿಸಿದ್ದಾರೆ. ಈ ವೇಳೆ ಅದಕ್ಕೆ ಗುಂಡು ಹೊಡೆಯಲಾಯಿತಾದರೂ ಅದು ಚಿರತೆಗೆ ತಾಗಿಲ್ಲವೆನ್ನಲಾಗಿದೆ. ಚಿರತೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಭೀತಿಗೊಂಡಿದ್ದು, ಮಕ್ಕಳು ಶಾಲೆಗೆ ಕೂಡಾ ತೆರಳದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಚಿರತೆಯ ಶರೀರದಲ್ಲಿ ಹಂದಿಗಿಟ್ಟ ಕುಣಿಕೆಯು ಇದೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ಚಿರತೆ ತುಂಬಾ ದೂರ ಹೋಗಿ ರಲಾರದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ನಿನ್ನೆ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಪೆರ್ಲಡ್ಕದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಮಧ್ಯೆ ಒಯೋಲತ್ ಎಂಬಲ್ಲಿ ಮುಳ್ಳು ಹಂದಿಯನ್ನು ಕೊಂದು ಹಾಕಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಕಳೇಬರ ಅರ್ಧ ಮಾತ್ರವೇ ಕಂಡು ಬರುತ್ತಿದೆ.