ಬದಿಯಡ್ಕ: ಚೇಡಿಕಾನ ನಿವಾಸಿ ಮೊಹಮ್ಮದ್ ಶಾಫಿ ಎಂಬವರ ಮನೆ ಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂ ಧಿಸಿ ಬದಿಯಡ್ಕ ಪೊಲೀಸರು ನಡೆಸಿದ ತನಿಖೆ ವೇಳೆ ಕಳ್ಳನದ್ದೆಂದು ಅಂದಾಜಿ ಸಲಾದ ಸಿಸಿ ಟಿವಿ ದೃಶ್ಯವೊಂದು ಪತ್ತೆಯಾಗಿದೆ. ತಲೆಗೆ ಬಟ್ಟೆ ಬಿಗಿದು ಮನೆಯೊಳಗೆ ಸುತ್ತಾಡುವ ವ್ಯಕ್ತಿಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅದನ್ನು ಸಂಗ್ರಹಿಸಿಕೊಂಡ ಪೊಲೀಸರು ಅದರ ಆಧಾರದಲ್ಲಿ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ. ಮೊನ್ನೆ ರಾತ್ರಿ ಮೊಹಮ್ಮದ್ ಶಾಫಿಯ ಮನೆಗೆ ನುಗ್ಗಿದ ಕಳ್ಳರು ಕಪಾಟುಗಳನ್ನು ತೆರೆದು ಅದರಲ್ಲಿದ್ದ ೧೫ ಪವನ್ ಚಿನ್ನಾಭರಣಗಳನ್ನು ದೋಚಿದ್ದಾರೆ. ಕುಟುಂಬ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಮನೆಗೆ ಕಳ್ಳರು ನುಗ್ಗಿದ್ದಾರೆ. ನಿನ್ನೆ ಬೆಳಿಗ್ಗೆ ಅವರು ಮರಳಿ ಬಂದಾಗಲೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಮೊಹಮ್ಮದ್ ಶಾಫಿಯವರ ಮನೆಯ ಸಮೀಪದಲ್ಲೇ ಇರುವ ಮತ್ತೆರಡು ಮನೆಗಳಿಗೂ ಕಳ್ಳರು ನುಗ್ಗಿದ್ದಾರೆ.
ಈ ಮನೆಯವರು ಗಲ್ಫ್‌ನಲ್ಲಿದ್ದಾರೆ. ಇದರಿಂದ ಯಾವೆಲ್ಲ ಸೊತ್ತುಗಳು ಕಳವಿಗೀಡಾಗಿವೆಯೆಂದು ತಿಳಿದು ಬಂದಿಲ್ಲ. ಕಳವು ನಡೆದ ಮನೆಗಳಿಗೆ ನಿನ್ನೆ ಬದಿಯಡ್ಕ ಪೊಲೀಸರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಇಂದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.