ಚೌಕಿ ಕೆ.ಕೆ.ಪುರಂನಲ್ಲಿ ಅಪಘಾತ ಭೀತಿ: ಕುಸಿದ ರಸ್ತೆ ಬದಿ ದುರಸ್ತಿಗೆ ಕ್ರಮವಿಲ್ಲ
ಮೊಗ್ರಾಲ್ ಪುತ್ತೂರು: ಮೊಗ್ರಾಲ್ ಪುತ್ತೂರು ಪಂಚಾಯತ್ ವ್ಯಾಪ್ತಿಯ ಚೌಕಿ ಉಳಿಯತ್ತಡ್ಕ ಕೋಪಾ ರಸ್ತೆಯಲ್ಲಿ ಚೌಕಿ ಕೆ.ಕೆ.ಪುರಂ ಜಂಕ್ಷನ್ ಬಳಿ ರಸ್ತೆಯ ಒಂದು ಭಾಗ ಕುಸಿದು ಹಲವು ತಿಂಗಳು ಕಳೆದರೂ ಯಾವುದೇ ದುರಸ್ತಿ ಕಾರ್ಯ ನಡೆಸದ ಬಗ್ಗೆ ಸ್ಥಳೀಯರು ರೋಷಗೊಂಡಿದ್ದಾರೆ. ಇತ್ತೀಚೆಗೆ ಇಲ್ಲಿ ಆಟೋರಿಕ್ಷಾ ಮತ್ತು ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಗಾಯಗೊಂಡ ಚೌಕಿಯ ಪತ್ರಿಕೆ ವಿತರಣೆಗಾರ ಹಮೀದ್ ಬದರ್‌ನಗರ ಚಿಕಿತ್ಸೆಯಲ್ಲಿದ್ದಾರೆ. ಇದಲ್ಲದೆ ಇಲ್ಲಿ ರಸ್ತೆಯ ಒಂದು ಭಾಗದಲ್ಲಿ ಸ್ಥಾಪಿಸಿದ ಕಾಲುದಾರಿಯ ಸ್ಲ್ಯಾಬ್ ಮುರಿದ ಸ್ಥಿತಿಯಲ್ಲಿದೆ. ಹಲವು ಕಡೆಗಳಲ್ಲಿ ಚರಂಡಿಗೆ ಸ್ಲ್ಯಾಬ್ ಹಾಕದ ಕಾರಣ ನಡೆದು ಹೋಗಲು ಕಷ್ಟಪಡುವುದು ನಿತ್ಯ ಘಟನೆಯಾಗಿದೆ. ರಸ್ತೆ ಬದಿ ಕುಸಿದ ಸ್ಥಳದಲ್ಲಿ ಡಾಮರಿನ ಡ್ರಮ್ ಇಟ್ಟು ಸೂಚನಾ ಬೋರ್ಡ್ ಸ್ಥಾಪಿಸಿದ್ದಲ್ಲದೆ ಬೇರೆ ಯಾವುದೇ ಕ್ರಮ ಅಧಿಕಾರಿಗಳು ಕೈಗೊಂಡಿಲ್ಲವೆಂದು ಸ್ಥಳೀಯರು ಆರೋಪಿಸುತ್ತಾರೆ.
ಮುಂದೆ ನಡೆಯಲಿರುವ ಅಪಘಾತಗಳನ್ನು ತಪ್ಪಿಸಲು ಈ ಸ್ಥಳದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚೌಕಿ ಸಂದೇಶ ಲೈಬ್ರೆರಿ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ನೀಡಿದ್ದಾರೆ.