ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ 9ನೇ ತರಗತಿ ವಿದ್ಯಾರ್ಥಿಯ ಕಾಲು ಎಲುಬು ಮುರಿತ
ಕಾಸರಗೋಡು: ತಿರುವನಂ ತಪುರದಲ್ಲಿ ವಿದ್ಯಾರ್ಥಿಗಳ ಮಧ್ಯೆ ಪರಸ್ಪರ ಮಾರಾಮಾರಿ ಉಂಟಾಗಿ ಅದರಲ್ಲಿ 10ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಶಹಬಾಸ್ ಕೊಲೆಗೈಯ್ಯಲ್ಪಟ್ಟ ಬೆನ್ನಲ್ಲೇ ಅದೇ ರೀತಿಯ ವಿದ್ಯಾರ್ಥಿ ಘರ್ಷಣೆ ಯೊಂದು ಹೊಸದುರ್ಗದಲ್ಲಿ ನಡೆದು ೯ನೇ ತರಗತಿ ವಿದ್ಯಾರ್ಥಿಯ ಕಾಲು ಮುರಿತಕ್ಕೊಳಗಾಗಿದ್ದಾನೆ.
ಪಳ್ಳಿಕ್ಕೆರೆ ತೆಕ್ಕೇಕುನ್ನು ನಿವಾಸಿ ವಿಶಾಖ್‌ಕೃಷ್ಣನ್ ಗಾಯಗೊಂಡಿದ್ದು, ಆ ಬಗ್ಗೆ ನೀಡಲಾದ ದೂರಿನಂತೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಟರ್ಫ್‌ನಲ್ಲಿ ಫುಟ್ಬಾಲ್ ಆಟ ವೀಕ್ಷಿಸಲೆಂದು ಹೊಸದುರ್ಗ ನೋರ್ತ್‌ಗೆ ಫೆ. 23ರಂದು ವಿಶಾಖ್ ಹೋಗಿದ್ದನು. ಆತ ಕಲಿಯುತ್ತಿರುವ ಅದೇ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ತಂಡವೊಂದು ಆಗ ಆತನ ಮೇಲೆ ಹಲ್ಲೆ ನಡೆಸಿದೆಯೆಂದು ಆತನ ಮನೆಯವರು ಆರೋಪಿಸಿದ್ದಾರೆ. ವಿಶಾಖ್‌ನ ಸಹೋದರ ಪೃಥ್ವಿ ಕೂಡಾ ಅದೇ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದು, ಆತನನ್ನು ಶಾಲೆಯ ಒಂದು ತಂಡದ ವಿದ್ಯಾರ್ಥಿಗಳು ಈ ಹಿಂದೆ ಹಲ್ಲೆ ನಡೆಸಿದ್ದರು. ಅದನ್ನು ವಿಶಾಖ್ ಪ್ರಶ್ನಿಸಿದ್ದನು. ಆ ದ್ವೇಷದಿಂದ ವಿದ್ಯಾರ್ಥಿಗಳ ತಂಡ ಆತನ ಮೇಲೆ ಹಲ್ಲೆ ನಡೆಸಿದೆ ಎಂದು ವಿಶಾಖ್‌ನ ತಂದೆ ವಿಶ್ವನಾಥನ್ ಹೇಳಿದ್ದಾರೆ.
ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ವಿಶಾಖ್‌ನನ್ನು ಮೊದಲು ಹೊಸದುರ್ಗದ ಖಾಸಗಿ ಆಸ್ಪತ್ರೆಯೊಂದರಲ್ಲೂ ಬಳಿಕ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಆತನನ್ನು ಅಲ್ಲಿಂದ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈಗ ಆತನನ್ನು ಅಲ್ಲಿಂದ ಮನೆಗೆ ಕರೆತರಲಾಗಿದೆ. ಹಲ್ಲೆಯಿಂದಾಗಿ ವಿಶಾಖ್‌ನಿಗೆ ವಾರ್ಷಿಕ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲವೆಂದು ಮನೆಯವರು ತಿಳಿಸಿದ್ದಾರೆ.