ಜಿಲ್ಲೆಯ ಅಡಿಕೆ ಕೃಷಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಾಣಲು ಆಗ್ರಹಿಸಿ ಕೃಷಿಕರ ಸಮ್ಮೇಳನ 5ರಂದು

ಬದಿಯಡ್ಕ: ಜಿಲ್ಲೆಯ ಅಡಕೆ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಉಂಟಾಗದ ಹಿನ್ನೆಲೆಯಲ್ಲಿ ಹಾಗೂ ಕಾಲಾವಸ್ಥೆ ಬದಲಾವಣೆಯಿಂದ ಕೃಷಿಕರು ತೀವ್ರ ಸಂದಿಗ್ಧತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಕ್ಕಾಗಿ ಜಿಲ್ಲೆಯ ಕಂಗು ಕೃಷಿಕರ ಸಮ್ಮೇಳನ ಈ ತಿಂಗಳ 5ರಂದು ಬದಿಯಡ್ಕದಲ್ಲಿ ನಡೆಸುವುದಾಗಿ ಕಿಸಾನ್ ಸೇನೆ ಜಿಲ್ಲಾ ಪದಾಧಿಕಾರಿಗಳು ಸುದ್ಧಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ ೩ ಗಂಟೆ ವರೆಗೆ ಸಮ್ಮೇಳನ ನಡೆಯಲಿದ್ದು, ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು.

ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ, ಚಂದ್ರಶೇಖರ ರಾವ್ ಕಲ್ಲಗ, ಶಾಸಕರಾದ ಸಿ.ಎಚ್. ಕುಂಞಂಬು, ಎಕೆಎಂ ಅಶ್ರಫ್, ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು, ಬದಿಯಡ್ಕ ಪಂ. ಅಧ್ಯಕ್ಷೆ ಶಾಂತ ಸಹಿತ ವಿವಿಧ ರಾಜಕೀಯ ಪಕ್ಷದ ಮುಖಂಡರು ಇಲಾಖೆ ಮಟ್ಟದ ಅಧಿಕಾರಿಗಳು ಭಾಗವಹಿಸುವರೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ಅಡಕೆ ಉತ್ಪಾದನೆ ಪ್ರತೀ ವರ್ಷ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕಂಗು ಕೃಷಿಕರು ಸಂದಿಗ್ಧತೆಯಲ್ಲಿದ್ದಾರೆ. ಜಿಲ್ಲೆಯಲ್ಲಿ 10,000ಕ್ಕೂ ಅಧಿಕ ಕುಟುಂಬಗಳು ಕಂಡು ಕೃಷಿಯನ್ನು ಆಶ್ರಯಿಸಿ ಜೀವಿಸುತ್ತಿದ್ದಾರೆ. 19,500 ಹೆಕ್ಟರ್ ಭೂಮಿಯಲ್ಲಿ ಅಡಕೆ ಕೃಷಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಎರಡು ಲಕ್ಷ ಕ್ವಿಂಟಾಲ್‌ಗೂ ಹೆಚ್ಚು ಅಡಕೆ ಉತ್ಪಾದಿಸಲಾಗುತ್ತಿದೆ. ಹೆಚ್ಚುತ್ತಿರುವ ರೋಗಗಳನ್ನು ಹತೋಟಿಗೆ ತರಲು ಸರಕಾರ, ಕೃಷಿ ಇಲಾಖೆ ಮಟ್ಟದಲ್ಲಿ ಕ್ರಮ ಉಂಟಾಗುತ್ತಿಲ್ಲ. ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ಈ ವಿಷಯವನ್ನು ಮಂಡಿಸಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಸಚಿವ ಜಿಲ್ಲೆಯ ಶಾಸಕರು, ಅಧಿಕಾರಿಗಳೊಂದಿಗೆ ವಿಧಾನಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಸಭೆ ನಡೆಸಿ ದ್ದರು. ಆದರೆ ಅದರ ಮುಂದುವರಿದ ಕ್ರಮ ಉಂಟಾಗಲಿಲ್ಲ. ಹಳದಿ ರೋಗ, ಎಲೆಚುಕ್ಕಿ ರೋಗ, ಹಿಂಗಾರ ಒಣಗುವುದು, ಮಹಾಳಿ ಮೊದಲಾದ ರೋಗಗಳಿಂದ ಕಂಗು ನಾಶದತ್ತ ಸಾಗುತ್ತಿದೆ. ಎಲ್ಲಾ ಅಡಕೆ ಕೃಷಿಕರಿಗೂ ಭೂ ವಿಸ್ತೃತಿ ನೋಡದೆ ಉಚಿತವಾಗಿ ಔಷಧಿ ಸಿಂಪಡಿಸಲು ವ್ಯವಸ್ಥೆ ಉಂಟಾಗಬೇಕು, ಪಂಚಾಯತ್‌ನ ಸ್ವಂತ ನಿಧಿಯಿಂದ ಔಷಧಿ ಸಿಂಪಡಿಸಲು ಮೊತ್ತ ಮೀಸಲಿಡುವುದಕ್ಕೆ ಸರಕಾರ ಆದೇಶ ಹೊರಡಿಸಬೇಕು, ಕೃಷಿ ಸಾಲದ ವಾಯ್ದೆ ಬಡ್ಡಿರಹಿತವಾಗಿ ಮೂರು ವರ್ಷದ ವರೆಗೆ ಮುಂದುವರಿಸಬೇಕು, ಜಪ್ತಿ ಕ್ರಮಗಳನ್ನು ಹೊರತುಪಡಿಸಬೇಕು, ಕೃಷಿ ಸಾಲದ ಪ್ರಸ್ತುತ ಇರುವ ಎಲ್ಲಾ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ಬದಿಯಡ್ಕದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಸುದ್ಧಿಗೋಷ್ಠಿ ಯಲ್ಲಿ ಭಾಗವಹಿಸಿದ ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ, ಸುಲೈಖಾ ಮಾಹಿನ್, ಶಾಜಿ ಕಾಡಮನ, ಖಮರುದ್ದೀನ್ ಪಾಡಲಡ್ಕ ತಿಳಿಸಿದ್ದಾರೆ.

You cannot copy contents of this page