ಕಾಸರಗೋಡು: ತೆಂಗಿನಕಾಯಿ ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಗಂಭೀರ ಗಾಯಗೊಂಡು ಕಣ್ಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾಂಗ್ರೆಸ್‌ನ ಪ್ರಾದೇಶಿಕ ನೇತಾರ ಮೃತಪಟ್ಟರು. ಪರಪ್ಪ ತೋಡನ್‌ಪಾಲ್ ನಿವಾಸಿಯೂ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಸಿ. ರವಿ (46) ಮೃತಪಟ್ಟ ದುರ್ದೈವಿ. ಕಳೆದ ಮಂಗಳವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ತೋಟದಲ್ಲಿ ಯಂತ್ರ ಉಪಯೋಗಿಸಿ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಮಡಲು ವಿದ್ಯುತ್ ತಂತಿಗೆ ಸ್ಪರ್ಶಿಸಿ ಶಾಕ್ ತಗಲಿದ್ದ ಇವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಇದರಿಂದ ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾ ಗದೆ ನಿನ್ನೆ ಮೃತಪಟ್ಟರು.
ಕೆಂಪುಕಲ್ಲು ವಲಯದ ಕಾರ್ಮಿಕನೂ ಆಗಿದ್ದ ಇವರು ಹಗ್ಗಜಗ್ಗಾಟ ತಾರೆಯೂ ಆಗಿದ್ದರು. ಪರಪ್ಪ ಅರ್ಬನ್ ಬ್ಯಾಂಕ್ ಡೈರೆಕ್ಟರ್ ಕೂಡಾ ಆಗಿದ್ದರು. ದಿ| ಗೋಪಾಲನ್- ಕಲ್ಯಾಣಿ ಅಮ್ಮ ದಂಪತಿಯ ಪುತ್ರನಾದ ರವಿ ಅವಿವಾಹಿತನಾಗಿದ್ದಾರೆ. ಮೃತರು ಸಹೋದರ- ಸಹೋದರಿಯರಾದ ಕಾರ್ತ್ಯಾಯಿನಿ, ಮಧು, ವಿನೋದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.