ಥಾರ್ ಜೀಪು ಸಂಚರಿಸುತ್ತಿದ್ದಂತೆ ಉರಿದು ನಾಶ : ಯುವಕರು ಅದಷ್ಟವಶಾತ್ ಅಪಾಯದಿಂದ ಪಾರು
ಕುಂಬಳೆ: ನೋಂದಾವಣೆ ಕೂಡ ನಡೆಯದ ಹೊಸ ಥಾರ್ ಜೀಪು ಸಂಚರಿಸುತ್ತಿದ್ದಂತೆ ಪೂರ್ಣವಾಗಿ ಉರಿದು ನಾಶಗೊಂಡ ಘಟನೆ ಕುಂಬಳೆ ಬಳಿಯ ಪಚ್ಚಂಬಳದಲ್ಲಿ ನಡೆದಿದೆ. ಜೀಪುನೊಳಗಿದ್ದವರು ತಕ್ಷಣ ಹೊರಗಿಳಿದುದರಿಂದ ಅದೃಷ್ಟವಶಾತ್ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಜೀಪು ಹೊಸಂಗಡಿ ನಿವಾಸಿಯೊಬ್ಬರ ಹೆಸರಲ್ಲಿ ತಾತ್ಕಾಲಿಕವಾಗಿ ರಿಜಿಸ್ಟ್ರೇಷನ್ ನಡೆಸಿದ್ದುದಾಗಿದೆ. ಕೆಲವರು ಯುವಕರು ನಿನ್ನೆ ಮಧ್ಯಾಹ್ನ ೧೨ ಗಂಟೆ ವೇಳೆ ಜೀಪು ಸಹಿತ ಪಚ್ಚಂಬಳ ಮೈದಾನಕ್ಕೆ ತಲುಪಿದ್ದರು. ಜೀಪಿನಲ್ಲಿ ಇವರು ಸುತ್ತಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಉರಿಯ ತೊಡಗಿದಂತೆ ಜೀಪನ್ನು ನಿಲ್ಲಿಸಿ ಅದಲ್ಲಿದ್ದವರು ಓಡಿ ಪಾರಾಗಿದ್ದಾರೆ. ವಿಷಯ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದರೂ ಅಷ್ಟರೊಳಗೆ ವಾಹನ ಪೂರ್ಣವಾಗಿ ಉರಿದು ನಾಶಗೊಂಡಿತ್ತು. ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.