ದಾನಿಗಳ, ಸರಕಾರದ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
ಸೀತಾಂಗೋಳಿ: ಅಸೌಖ್ಯ ಬಾಧಿತ ತಾಯಿ ಹಾಗೂ ಪುತ್ರ ವಾಸಿಸುವ ಮನೆಯೊಂದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಮುಖಾರಿಕಂಡದಲ್ಲಿ ಪರಿಶಿಷ್ಟ ಜಾತಿಗೊಳಪಟ್ಟ ಕಮಲ (೬೦) ಹಾಗೂ ಪುತ್ರ ರಮೇಶ್ (೪೦) ವಾಸಿಸುವ ಮನೆಯ ಸ್ಥಿತಿ ಇದಾಗಿದೆ. ಕಮಲರಿಗೆ ಪಕ್ಷವಾತ ಬಾಧಿಸಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಗಾಲಿಕುರ್ಚಿ ಮೂಲಕವೇ ಅತ್ತಿತ್ತ ಸಾಗಬೇಕಾಗಿದೆ. ಇವರ ಪುತ್ರ ರಮೇಶನಿಗೂ ಅಸೌಖ್ಯ ಬಾಧಿಸಿದ್ದು, ಇದರಿಂದ ಕೂಲಿ ಕಾರ್ಮಿಕನಾದ ಇವರಿಗೆ ಹೆಚ್ಚು ದುಡಿಯಲು ಸಾಧ್ಯವಾಗುತ್ತಿಲ್ಲ. ಆದರೂ ಜೀವನ ಸಾಗಿಸಲು ರಮೇಶ ಕೆಲಸಕ್ಕೆ ತೆರಳುತ್ತಿದ್ದು, ಅದರಿಂದ ಸಿಗುವ ಮೊತ್ತವೇ ಇವರ ಜೀವನ ಸಾಗಲು ಏಕೈಕ ದಾರಿ. ಅಪರೂಪಕ್ಕೊಮ್ಮೆ ಸಿಗುವ ಕೆಲಸದಿಂದ ಲಭಿಸುವ ಮೊತ್ತ ದೈನಂದಿನ ಖರ್ಚು ಹಾಗೂ ಚಿಕಿತ್ಸೆಗೆ ಸಾಕಾಗುತ್ತಿಲ್ಲವೆಂದು ರಮೇಶ ತಮ್ಮ ಸಂಕಷ್ಟ ವನ್ನು ವಿವರಿಸುತ್ರೆ. ತಾಯಿಯ ಶುಶ್ರೂಷೆ ಯನ್ನು ರಮೇಶರೇ ಮಾಡಬೇಕಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಲಾದ ಹೆಂಚಿನ ಮನೆ ಇವರದ್ದಾಗಿದ್ದು, ಎರಡು ಕೊಠಡಿಗಳಿವೆ. ಛಾವಣಿಗೆ ಬಳಸಿದ ಮರದ ಸಲಕರಣೆಗಳು ಮುರಿದು ನಿಂತಿದ್ದು, ಇದ ರಿಂದ ಮಳೆ ನೀರು ಮನೆಯೊಳಗೆ ತುಂಬಿ ಕೊಳ್ಳುತ್ತಿದೆ. ಈ ಕುಟುಂಬದ ದಯನೀಯ ಸ್ಥಿತಿಯನ್ನು ಕಂಡು ನಾಗರಿಕರು ಇತ್ತೀಚೆಗೆ ಛಾವಣಿಗೆ ಪ್ಲಾಸ್ಟಿಕ್ ಹೊದಿಸಿ ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದಾರೆ. ಆದರೆ ಜೋರಾಗಿ ಗಾಳಿ, ಮಳೆ ಸುರಿದರೆ ಮನೆಗೆ ಅಪಾಯ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಬಡ ಕಟುಂಬದ ಜೀವನ ಇಷ್ಟು ಸಂಕಷ್ಟದಿಂದ ಕೂಡಿರುವಾಗ ದಾನಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಣ್ಣು ಹಾಯಿಸಿ ನೆರವು ನೀಡಬಹುದೇ ಎಂಬ ನಿರೀಕ್ಷೆ ಕಮಲ ಹಾಗೂ ಪುತ್ರ ರಮೇಶರದ್ದಾಗಿದೆ.