ದೆಹಲಿಯಲ್ಲಿ 150 ಶಾಲೆಗಳಿಗೆ ಬಾಂಬ್ ಬೆದರಿಕೆ: ಉಗ್ರ ಕೃತ್ಯ ಶಂಕೆ
ನವದೆಹಲಿ: ರಾಷ್ಟ್ರ ರಾಜಧಾನಿಯಾದ ದೆಹಲಿ ಮತ್ತು ಪರಿಸರ ವಲಯವಾದ ಎನ್‌ಸಿಆರ್ ಪ್ರದೇಶದ ಕನಿಷ್ಠ ೧೫೦ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಯೊಡ್ಡಲಾಗಿದೆ.
ಈ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಭಯಭೀತರಾದ ಪೋಷಕರು ಶಾಲೆಗಳತ್ತ ಧಾವಿಸಿ ಬಂದು ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ. ಇದು ಅತ್ಯಂತ ಕಂಡು ಕೇಳರಿಯದ ಸನ್ನಿವೇಶವಾಗಿದೆ.
ಇಮೇಲ್ ಸಂದೇಶ ಲಭಿಸಿದ ಕೂಡಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ತಕ್ಷಣ ಎಲ್ಲಾ ಶಾಲೆಗಳಿಗೆ ಸಾಗಿ ಮೂಲೆ ಮೂಲೆಗಳಲ್ಲಿ ಶೋಧ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಇಮೇಲ್ ಸಂದೇಶವನ್ನು ರಷ್ಯಾದಿಂದ ಕಳುಹಿಸಿಕೊಡಲಾಗಿದೆ. ಭೀತಿ ಸೃಷ್ಟಿಸುವ ಉದ್ದೇಶದಿಂದ ಇದನ್ನು ಕಳುಹಿಸಿಕೊಡಲಾಗಿದೆ. ಎಲ್ಲಾ ಇಮೇಲ್‌ಗಳಲ್ಲಿ ಏಕರೀತಿಯ ಸಂದೇಶ ಹೊಂದಿದೆ. ಇದು ಉಗ್ರಗಾಮಿಗಳ ಕೃತ್ಯವಾಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಡಾರ್ಕ್ ನೆಟ್ ಬಳಸಿ ತಮ್ಮ ಗುರುತನ್ನು ಮರೆಮಾಚುವ ಸಾಧ್ಯತೆಯೂ ಇದೆ. ಈ ಘಟನೆಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದಾಗಿ ಪೊಲೀಸರು ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮಾತ್ರವಲ್ಲ ದಿಲ್ಲಿಯಾದ್ಯಂತವಾಗಿ ಪೊಲೀಸರು ತೀವ್ರ ಕಟ್ಟೆಚ್ಚರ ಪಾಲಿಸತೊಡಗಿದ್ದಾರೆ ಮತ್ತು ಪೂರ್ವ ದೆಹಲಿಯ ೨೪ ಖಾಸಗಿ ಶಾಲೆಗಳು, ದಕ್ಷಿಣ ದಿಲ್ಲಿಯ ೧೮ ಶಾಲೆಗಳು, ಪಶ್ಚಿಮ ದೆಹಲಿಯ ೨೧ ಶಾಲೆಗಳು ಮತ್ತು ಶಹದಾರದ ೧೦ ಶಾಲೆಗಳಲ್ಲಾಗಿ ಇಂತಹ ಇಮೇಲ್ ಬೆದರಿಕೆ ಬಂದಿದೆ. ಇದರ ಹೊರತಾಗಿ ನೋಯ್ಡಾ, ಖಾಸಿಯಾಬಾದ್ ಮತ್ತು ಗುರುಗ್ರಾಮದ ಅನೇಕ ಖಾಸಗಿ ಶಾಲೆಗಳಿಗೂ ಇಂತಹ ಬೆದರಿಕೆ ಉಂಟಾಗಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಪ್ರತೀ ಶಾಲೆಗಳಿಗೆ ಬಂದ ಇಮೇಲ್ ಸಂದೇಶದ ವಿಷಯ ಒಂದೇ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಕಳೆದ ಡಿಸೆಂಬರ್ ೧ರಂದು ಬೆಂಗಳೂರಿನ ೪೮ ಹಾಗೂ ಹೊರವಲಯದ ೬೮ ಶಾಲೆಗಳಿಗೂ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಲಭಿಸಿತ್ತು.