ನಿವೃತ್ತ ಬ್ಯಾಂಕ್ ನೌಕರ ಕೆರೆಯಲ್ಲಿ ಮುಳುಗಿ ಮೃತ್ಯು: ನಾಡಿನಲ್ಲಿ ಶೋಕ ಸಾಗರ
ಮಾನ್ಯ: ನಿವೃತ್ತ ಬ್ಯಾಂಕ್ ನೌಕರ ಬಾರಿಕ್ಕಾಡು ನಿವಾಸಿ ರಾಮಚಂದ್ರ ನಾಯ್ಕ್ (65) ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಸಿದೆ. ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ನೌಕರನಾಗಿದ್ದಾರೆ.
ನಿನ್ನೆ ಬೆಳಿಗ್ಗೆ ಕೊಲ್ಲಂಗಾನಕ್ಕೆಂದು ತಿಳಿಸಿ ರಾಮಚಂದ್ರ ನಾಯ್ಕ್ ಆಟೋ ರಿಕ್ಷಾದಲ್ಲಿ ತೆರಳಿದ್ದರು. ಕೊಲ್ಲಂಗಾನಕ್ಕೆ ತಲುಪಿದಾಗ ಅಲ್ಲಿನ ಪಾಂಡವರ ಕೆರೆ ಸಮೀಪವಿರುವ ನಾಗನಕಟ್ಟೆಯಲ್ಲಿ ಪ್ರಾರ್ಥಿಸಿ ಬರುವುದಾಗಿ ಆಟೋ ಚಾಲಕನಲ್ಲಿ ತಿಳಿಸಿ ಹೋಗಿದ್ದಾರೆನ್ನ ಲಾಗಿದೆ. ದೀರ್ಘ ಸಮಯವಾದರೂ ಅವರು ಮರಳಿಬಾರದ ಹಿನ್ನೆಲೆಯಲ್ಲಿ ಆಟೋ ಚಾಲಕ ಹುಡುಕಿ ನಾಗನಕಟ್ಟೆಯತ್ತ ತೆರಳಿದ್ದರು. ಈ ವೇಳೆ ರಾಮಚಂದ್ರ ನಾಯ್ಕ್‌ರ ಬಟ್ಟೆಬರೆ, ಚಪ್ಪಲಿ, ಮೊಬೈಲ್ ಪೋನ್ ಕೆರೆಯ ಬಳಿ ಕಂಡುಬಂದಿದೆ. ಈ ಬಗ್ಗೆ ಚಾಲಕ ಸ್ಥಳೀಯರಲ್ಲಿ ತಿಳಿಸಿದ್ದು, ಕೂಡಲೇ ಕಾಸರಗೋಡಿನಿಂದ ಅಗ್ನಿಶಾಮಕ ದಳ ತಲುಪಿ ರಾಮಚಂದ್ರರನ್ನು ಕೆರೆಯಲ್ಲಿ ಪತ್ತೆಹಚ್ಚಿದೆ. ಅಷ್ಟರೊಳಗೆ ಅವರು ಮೃತಪಟ್ಟಿದ್ದರೆಂದು ತಿಳಿದುಬಂದಿದೆ. ಕೆರೆಯಲ್ಲಿ ಸ್ನಾನ ಮಾಡಲೆಂದು ಇಳಿ ದಾಗ ಕಾಲು ಜಾರಿ ಬಿದ್ದು ಸಾವು ಸಂಭ ವಿಸಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ವಗೃಹಕ್ಕೆ ಕೊಂಡೊಯ್ದು ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಮೃತರು ಪತ್ನಿ ವಾರಿಜಾಕ್ಷಿ, ಮಕ್ಕಳಾದ ಭವ್ಯ, ಪೂರ್ಣಿಮ, ಚೈತ್ರ, ರಕ್ಷಿತ, ಅಳಿಯಂದಿರಾದ ವಸಂತ, ಶರತ್, ಸಹೋದರರಾದ ರಾಮ ನಾಯ್ಕ್, ಸುರೇಶ್, ಗೋಪಾಲಕೃಷ್ಣ, ಹರೀಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಈಶ್ವರ ಈ ಹಿಂದೆ ನಿಧನ ಹೊಂದಿದ್ದಾರೆ.