ನೀಲೇಶ್ವರ ಸುಡುಮದ್ದು ದುರಂತ : ಜಾಮೀನು ರದ್ದು ಕ್ರಮಕ್ಕೆ ತಡೆಯಾಜ್ಞೆ
ಕಾಸರಗೋಡು: ನೀಲೇಶ್ವರ ಅಂಞೂಟಂಬಲ ವೀರರ್ ಕಾವು ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವದಂಗವಾಗಿ ನಡೆದ ಸುಡುಮದ್ದು ಪ್ರದಶನದ ವೇಳೆ ಉಂಟಾದ ದುರಂತಕ್ಕೆ ಸಂಬಂಧಿಸಿ ಆರೋಪಿಗಳ ಜಾಮೀನು ರದ್ದುಪಡಿಸಿ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿಗೆ ಕೇರಳ ಹೈಕೋರ್ಟ್ ಎರಡು ವಾರಗಳ ಅವಧಿಗೆ ತಡೆಯಾಜ್ಞೆ ಹೊರಡಿಸಿದೆ.
ಈ ಪ್ರಕರಣದ ಆರೋಪಿಗಳೂ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಪದಾಧಿ ಕಾರಿಗಳೂ ಆಗಿರುವ ಚಂದ್ರಶೇಖರನ್ ಮತ್ತು ಕೆ.ಟಿ. ಭರತನ್ ಮತ್ತು ಪಟಾಕಿಗೆ ಕಿಚ್ಚಿರಿಸಿದ್ದ ರಾಜೇಶ್ ಕೊಟ್ರಚ್ಚಾಲ್ ಎಂಬವರಿಗೆ ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (2) ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಆ ಪೈಕಿ ಚಂದ್ರಶೇಖರನ್ ಮತ್ತು ಭರತನ್ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂ ಡಿದ್ದರು. ರಾಜೇಶ್ ಇನ್ನೂ ನ್ಯಾಯಾಂಗ ಬಂಧನದಲ್ಲಿ ದ್ದಾರೆ. ಈ ಮಧ್ಯೆ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಆರೋಪಿಗಳ ಜಾಮೀನನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ರದ್ದುಪಡಿಸಿತ್ತು. ನಂತರ ಚಂದ್ರಶೇಖರನ್ ಹಾಗೂ ಭರತನ್ ತಲೆಮರೆಸಿಕೊಂಡಿದ್ದರು. ಈಮಧ್ಯೆ ಅವರಿಬ್ಬರು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನೀಡಿದ ಆದೇಶಕ್ಕೆ ಎರಡು ವಾರಗಳ ತನಕ ತಡೆಯಾಜ್ಞೆ ಹೊರಡಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಈ ವಿಷಯವನ್ನು ಮುಂದಿನ ತಿಂಗಳ ೯ಕ್ಕೆ ಹೈಕೋರ್ಟ್ ಮತ್ತೆ ಪರಿಶೀಲಿಸಲಿದೆ.