ನೌಕರರ ಮಿಂಚಿನ ಮುಷ್ಕರ: ಮುನ್ಸೂಚನೆಯಿಲ್ಲದೆ ವಿಮಾನ ರದ್ದು; ಪ್ರಯಾಣಿಕರಿಂದ ಪ್ರತಿಭಟನೆ
ಕೊಚ್ಚಿ: ನೆಡುಂಬಾಶ್ಶೇರಿ ವಿಮಾನ ನಿಲ್ದಾಣದಿಂದ ಹೊರಡಬೇಕಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ೨ ವಿಮಾನಗಳನ್ನು ಮುನ್ನೆಚ್ಚರಿಕೆಯಿಲ್ಲದೆ ರದ್ದುಗೊಳಿಸಲಾಗಿದೆ. ಮುಂಜಾನೆ ೨.೫ಕ್ಕೆ ಹೊರಡಬೇಕಾಗಿದ್ದ ಶಾರ್ಜಾ ವಿಮಾನ, ಬೆಳಿಗ್ಗೆ ೮.೫೦ಕ್ಕೆ ಮಸ್ಕತ್‌ಗೆ ತೆರಳಬೇಕಾಗಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. ನೌಕರರ ಮಿಂಚಿನ ಮುಷ್ಕರವೇ ವಿಮಾನ ರದ್ದುಗೊಳಿಸಲು ಕಾರಣವೆಂದು ಪ್ರಯಾಣಿಕರಿಗೆ ತಿಳಿಸಲಾಗಿದೆ. ಬದಲಿ ವ್ಯವಸ್ಥೆ ಏರ್ಪಡಿಸದಿರುವುದರ ವಿರುದ್ಧ ಪ್ರಯಾಣಿಕರು ಪ್ರತಿಭಟಿಸುತ್ತಿದ್ದಾರೆ. ನೆಡುಂಬಾಶ್ಶೇರಿಗೆ ತಲುಪಬೇಕಾಗಿದ್ದ ನಾಲ್ಕು ವಿಮಾನಗಳನ್ನು ಕೂಡಾ ರದ್ದುಪಡಿಸಲಾಗಿದೆ.
ನಿನ್ನೆ ಮಧ್ಯರಾತ್ರಿಯಿಂದ ಏರ್ ಇಂಡಿಯಾ ನೌಕರರು ದಿಢೀರ್ ಮುಷ್ಕರ ಘೋಷಿಸಿದ್ದಾರೆ. ಬೆಳಿಗ್ಗೆ ೧೧.೩೦ಕ್ಕೆ ಶಾರ್ಜಾದಿಂದ ತಲುಪಬೇಕಾದ ವಿಮಾನ, ಸಂಜೆ ೫.೪೫ಕ್ಕೆ ಮಸ್ಕತ್‌ನಿಂದ ತಲುಪಬೇಕಾದ ವಿಮಾನ, ಸಂಜೆ ೬.೩೦ಕ್ಕೆ ಬಹರೈನ್‌ನಿಂದ ತಲುಪಬೇಕಾದ ವಿಮಾನ, ರಾತ್ರಿ ೭.೧೦ಕ್ಕೆ ದಮಾಂನಿಂದ ತಲುಪಬೇಕಾದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿಮಾನ ರದ್ದುಗೊಳಿಸಿರುವುದನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರು ಪ್ರತಿಭಟಿಸುತ್ತಿದ್ದಾರೆ. ಪ್ರಯಾಣಿಕರು ಚೆಕ್‌ಇನ್ ನಡೆಸಲು ತಲುಪಿದ ಬಳಿಕವೇ ನೌಕರರ ಮುಷ್ಕರದಿಂದಾಗಿ ವಿಮಾನ ರದ್ದುಗೊಳಿಸಿರುವ ಬಗ್ಗೆ ಏರ್ ಇಂಡಿಯಾ ತಿಳಿಸಿದೆ. ಇದೇ ವೇಳೆ ಇತರ ದಿನಗಳಿಗೆ ಟಿಕೆಟ್ ನೀಡಲಾಗುವುದೋ ಎಂಬ ಬಗ್ಗೆ ಏರ್ ಇಂಡಿಯಾ ಪ್ರತಿಕ್ರಿಯಿಸಲಿಲ್ಲ. ಕರಿಪ್ಪೂರ್‌ನಿಂದ ರಾತ್ರಿ ದಮಾಂಗೆ ತೆರಳಬೇಕಾದ ಏರ್ ಇಂಡಿಯಾ ವಿಮಾನವನ್ನು ಕೂಡಾ ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ದುಬೈ, ಮಸ್ಕತ್ ವಿಮಾನಗಳು ಸಂಚಾರ ನಡೆಸಿವೆ. ತಿರುವನಂತಪುರ ವಿಮಾನ ನಿಲ್ದಾಣದಿಂದಲೂ ನಾಲ್ಕು ವಿಮಾನಸಂಚಾರ ರದು ಗೊಳಿಸಲಾಗಿದೆ. ಮಸ್ಕತ್, ಶಾರ್ಜಾ, ದುಬೈ, ಅಬುದಾಬಿಗೆ ತೆರಳಬೇಕಾಗಿದ್ದ ವಿಮಾನಗಳನ್ನು ಇಲ್ಲಿಂದ ರದ್ದುಪಡಿಸಲಾಗಿದೆ.