ಪಾಕಿಸ್ತಾನದ 9 ಉಗ್ರಾಮಿ ಶಿಬಿರಗಳ ಮೇಲೆ ಸೇನೆಯಿಂದ ಕ್ಷಿಪಣಿ ದಾಳಿ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಪ್ರಿಲ್ 22ರಂದು ಪಾಕ್ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ  ಆಪರೇಶನ್ ಸಿಂಧೂರ್ ಎಂಬ ಹೆಸರಲ್ಲಿ ಭಾರತೀಯ ಸೇನೆ ಇಂದು ಮುಂಜಾನೆ ಸುಮಾರು 1 ಗಂಟೆ ವೇಳೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಉಗ್ರರ ನೆಲೆಗಳಿಗೆ ಕ್ಷಿಪಣಿ ದಾಳಿ ನಡೆಸಿದೆ. ಇದರಲ್ಲಿ 50 ಉಗ್ರರೂ ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.  ಭಾರತೀಯ ಸೇನಾ ಪಡೆ, ನೌಕಾಪಡೆ ಮತ್ತು ವಾಯುಪಡೆಗಳು ಸಂಯುಕ್ತವಾಗಿ ಈ  ದಾಳಿ ನಡೆಸಿದೆ. ಆ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿದೆ. ದೇಶಾದ್ಯಂ ತ ಇದು ಯುದ್ಧ ಪೂರ್ವ ಸಿದ್ಧತೆಯ ಅಣಕು ಕವಾಯತು ನಡೆಸುವ ಘೋಷಣೆ ಉಂಟಾಗಿರುವ ಸಂದರ್ಭ ದಲ್ಲೇ ಇಂದು ಮುಂಜಾನೆ ಭಾರತೀಯ ಸೇನೆ ಪಾಕ್ ಉಗ್ರರ ನೆಲೆಗಳಿಗೆ ಈ ಪ್ರತೀಕಾರ ದಾಳಿ ನಡೆಸಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿ ಸಂಘಟನೆಗಳ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಕೇಂದ್ರಗಳನ್ನೇ  ಪ್ರಧಾನ ಗುರಿಯಾಗಿಸಿ ಕೊಂಡು ಭಾರತ ಈ ದಾಳಿ ನಡೆಸಿದೆ. ಆ ಕೇಂದ್ರಗಳೆಲ್ಲವೂ ದಾಳಿಯಿಂದ ನೆಲಸಮಗೊಂಡಿದೆ. ನಿಯಂತ್ರಣ ರೇಖೆ ದಾಟದೆ ಭಾರತ ಈ ಕ್ಷಿಪಣಿ ದಾಳಿ ನಡೆಸಿದೆಯೆಂಬ ವಿಶೇಷತೆಯೂ ಇದಕ್ಕಿದೆ.  ಮಧ್ಯರಾತ್ರಿಯ ಹೊಡೆತಕ್ಕೆ ಪಾಕ್  ವಿಲವಿಲಗೊಂಡಿದೆ. ರಾತ್ರಿ ಬೆಚ್ಚಗೆ ಮಲಗಿದ್ದ ಪಾಕಿಗಳಿಗೆ ದಾಳಿ ಮೂಲಕ ಮಧ್ಯರಾತ್ರಿಯೇ ಸೂರ್ಯೋದಯ ಮೂಡಿಸಿದೆ.  ಈ ಕಾರ್ಯಾಚರಣೆಯು ಭಾರತದ ಗುಪ್ತಚರ ಸಂಸ್ಥೆಗಳು ಮತ್ತು ಭಾರತೀಯ ಸೇನೆಯ ಸಮನ್ವಯ ಯಶಸ್ಸನ್ನು ತೋರಿಸಿದೆ.  ಭಾರತೀಯ ಸೇನಾ ಪಡೆ ನಡೆಸಿದ  ಈ ಕಾರ್ಯಾಚರಣೆಗೆ  ವಿಪಕ್ಷಗಳೂ ಸೇರಿದಂತೆ ದೇಶಾದ್ಯಂತ ಎಲ್ಲರೂ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಮಾತ್ರವಲ್ಲದೆ ಭಾರತ ನಡೆಸಿದ ದಾಳಿಗೆ ದೇಶದ ಹಲವೆಡೆ ಸಂಭ್ರಮಾಚರಣೆ ನಡೆಸಲಾಗುತ್ತಿದೆ.

‘ಆಪರೇಷನ್ ಸಿಂಧೂರ್’ ಎಂದು ಹೆಸರಿಟ್ಟಿದ್ದೇಕೆ?

ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳಿಗೆ ಭಾರತ ಸೇನೆ  ನಡೆಸಿದ ದಾಳಿ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿಟ್ಟಿದ್ದೇಕೆ! ಇದು ವೈಯಕ್ತಿಕ ಮತ್ತು ರಾಷ್ಟ್ರೀಯ ನಷ್ಟದ ಸಾಂಕೇತಿಕ ಉಲ್ಲೇಖವಾಗಿದೆ. ವಿವಾಹಿತ ಹಿಂದೂ ಮಹಿಳೆಯರು ಸಾಂಪ್ರದಾಯಿಕ ತಮ್ಮ ಹಣೆಗೆ ಸಿಂಧೂರ ತಿಲಕವನ್ನಿರಿಸುತ್ತಾರೆ. ಸಾಂಪ್ರದಾಯಿಕವಾಗಿ ಅನ್ವಯಿಸುವ ಸಿಂಧೂರ ಎಂಬ ಪದವು ಪ್ರೀತಿ, ಬದ್ದತೆ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ.  ಕ್ರೂರ ದಾಳಿಯಿಂದ ಛಿಧ್ರಗೊಂಡ  ಮೌಲ್ಯಗಳು ಮತ್ತು ಸಂತ್ರಸ್ತರನ್ನು ಗೌರವಿಸಲು ಹಾಗೂ ರಾಷ್ಟ್ರದ ಸಂಕಲ್ಪದ ದ್ಯೋತಕವಾಗಿ ಈ ಕಾರ್ಯಾಚರಣೆಗೆ ಭಾರತ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿಸಲಾಗಿದೆ. ಆಪರೇಷನ್ ಸಿಂಧೂರ್ ಭಾವನಾತ್ಮಕವಾಗಿ ಪ್ರತಿಧ್ವನಿಸುವ ಮತ್ತು ಸಾಂಕೇತಿಕವಾಗಿ ಶಕ್ತಿಯುತವಾದ ಸಂದೇಶವನ್ನು ಇದು ನೀಡುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಲು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ  ಈ ಹೆಸರು ನೀಡಿದ್ದಾರೆ.

ದಾಳಿ ಭಯೋತ್ಪಾದನೆಗೆ ನೀಡಿದ ಪ್ರತ್ಯುತ್ತರ-ವಿದೇಶಾಂಗ ಕಾರ್ಯದರ್ಶಿ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳಿಗೆ ಭಾರತ ನಡೆಸಿರುವ ದಾಳಿ ಭಯೋತ್ಪಾದನೆಗೆ ನೀಡಲಾದ  ಪ್ರತ್ಯುತ್ತರವಾಗಿದೆಯೆಂದು  ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿರ್ಸಿ ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಸ್ಪಷ್ಟಗೊಂಡಿದೆ. ಗಡಿದಾಟಿ ನಡೆಸುವ  ದಾಳಿಗಳಿಗೆ ನೀಡಲಾದ ಉತ್ತರ ಇದಾಗಿದೆ.

ಉಗ್ರಗಾಮಿಗಳ ನೆಲೆಯನ್ನು ಮಾತ್ರವೇ ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ. ಭಯೋತ್ಪಾದನೆಗೆ ಪಾಕಿಸ್ತಾನ ಸದಾ ಬೆಂಬಲ ನೀಡುತ್ತಾ ಬಂದಿದೆ. ಆದರೆ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಎಂದೂ ಧ್ವನಿಯೆತ್ತುತ್ತಿಲ್ಲ, ಭಾರತದ ಬಗ್ಗೆ ವಿಶ್ವದಲ್ಲಿ ತಪ್ಪು ಗ್ರಹಿಕೆ ಮೂಡಿಸುವ ಪ್ರಯತ್ನವನ್ನೂ ಪಾಕಿಸ್ತಾನ ನಡೆಸುತ್ತಿದೆ. ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಹಕ್ಕು ಭಾರತಕ್ಕಿದೆಯೆಂದು ಅವರು ಹೇಳಿದ್ದಾರೆ. ದಾಳಿಯಲ್ಲಿ 70 ಉಗ್ರರು ಹತರಾಗಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಸೇನಾಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page