ಪಾಕಿಸ್ತಾನ ಪರ ಬೇಹುಗಾರಿಕೆ: ಜ್ಯೋತಿ ಮಲ್ಹೋತ್ರ ಕಾಸರಗೋಡು ಸಂದರ್ಶನದ ಬಗ್ಗೆ ಶಂಕೆ; ಸಮಗ್ರ ತನಿಖೆ ಆರಂಭ

ಕಾಸರಗೋಡು: ಭಾರತದ ಶತ್ರು ದೇಶವಾದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಂತೆ ಬಂಧಿತಳಾಗಿರುವ ಹರ್ಯಾಣ ಮೂಲದ ಯೂ ಟ್ಯೂಬರ್ ಜ್ಯೋತಿ ಮಲ್ಹೋತ್ರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ಉದ್ಘಾಟನೆ ವೇಳೆ ಕಾಸರಗೋಡಿಗೂ ಬಂದಿದ್ದಳೆಂಬ  ಶಂಕೆ ಹರ್ಯಾಣ ಪೊಲೀಸರಿಗೆ ಲಭಿಸಿದೆ.

2023ರಲ್ಲಿ ಜ್ಯೋತಿ ಮಲ್ಹೋತ್ರ ಮೊತ್ತ ಮೊದಲಾಗಿ ಕೇರಳ ಸಂದರ್ಶಿಸಿದ್ದು, ಆ ಬಳಿಕ ಮೂರು ಬಾರಿ ಆಕೆ ಇಲ್ಲಿಗೆ ಸಂದರ್ಶಿಸಿದ್ದಳು. ಕೇರಳ ಸಂದರ್ಶನದ ವೀಡಿಯೋ ದೃಶ್ಯಗಳನ್ನು ಆಕೆ ತನ್ನ ಯೂ ಟ್ಯೂಬ್ ಚ್ಯಾನೆಲ್‌ನಲ್ಲೂ ಹಂಚಿಕೊಂಡಿದ್ದಳು. 2023 ಅಗೋಸ್ತ್‌ನಲ್ಲಿ ಜ್ಯೋತಿ ತಿರುವನಂತಪುರಕ್ಕೆ ಮೊದಲ ಬಾರಿಗೆ  ಆಗಮಿಸಿದ್ದಳು. ಕೇರಳಕ್ಕೆ ಮಂಜೂರು ಮಾಡಲಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಗಾಡಿಯ ಉದ್ಘಾಟನಾ ಸಮಾರಂಭದ ವೇಳೆ ಆಕೆ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬಯಿಂದ ನೇರವಾಗಿ ಕಾಸರಗೋಡಿಗೆ ಆಗಮಿಸಿ  ವಂದೇ ಭಾರತ್ ರೈಲು ಸೇವೆಯ ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸಿದ್ದಳೆಂದೂ ನಂತರ ವಂದೇ ಭಾರತ್ ರೈಲಿನಲ್ಲಿ ಆಕೆ ತಿರುವನಂತ ಪುರಕ್ಕೆ ಸಾಗಿದ್ದಳೆನ್ನಲಾಗಿದೆ. ಮರುದಿನ ಆಕೆ ತಿರುವನಂತಪುರದಿಂದ ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಮುಂಬಯಿಗೆ ಹಿಂತಿರುಗಿದ್ದಳೆಂದು ಹೇಳಲಾಗುತ್ತಿದೆ. ಅದಾದ ಬಳಿಕ ಆಕೆ ಕಣ್ಣೂರು ಮತ್ತು ಕೊಚ್ಚಿಗೂ ಭೇಟಿ ನೀಡಿದ್ದಳು. ಆದರೆ ಅದರ ವೀಡಿಯೋ ಚಿತ್ರಗಳನ್ನು ಆಕೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿ ಕೊಂಡಿರಲಿಲ್ಲ. ಅದಕ್ಕಿರುವ ಕಾರಣದ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಂತೆ ಜ್ಯೋತಿ ಸೇರಿದಂತೆ 12 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆಗಳ ಪ್ರಕಾರ ಈ ಎಲ್ಲಾ ಆರೋಪಿಗಳು  ಉತ್ತರ ಭಾರತದಲ್ಲಿ ಕಾರ್ಯವೆಸಗುತ್ತಿರುವ ಪಾಕಿಸ್ತಾನಿ ಗುಪ್ತಚರ ಏಜೆನ್ಸಿಗಳೊಂದಿಗೆ ಸಂಪರ್ಕ ಹೊಂದಿದ್ದರು. ಹೀಗೆ  ಬೇಹುಗಾರಿಕೆ ಆರೋಪದಂತೆ ಬಂಧಿತರಾದ 12 ಮಂದಿಯ ಪೈಕಿ 6 ಮಂದಿ ಪಂಜಾಬ್ ಹಾಗೂ ನಾಲ್ವರು ಹರ್ಯಾಣ ನಿವಾಸಿಗಳಾಗಿದ್ದಾರೆ. ಈ ಪೈಕಿ ಜ್ಯೋತಿ ಮಲ್ಹೋತ್ರಳನ್ನು ಮೇ 16ರಂದು ಹರ್ಯಾಣ ಪೊಲೀಸರು ಹಿಸಾರ್‌ನಿಂದ ಬಂಧಿಸಿದ್ದರು.

ಆಕೆ  ‘ಟ್ರಾವೆಲ್ ವಿತ್ ಜೋ’ ಎಂಬ ಯು ಟ್ಯೂಬ್ ಚಾನೆಲ್ ನಡೆಸುತ್ತಿದ್ದು ಅದರಲ್ಲಿ 3.77 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾಳೆ. ಪೊಲೀಸರ ಮಾಹಿತಿ ಪ್ರಕಾರ ಭಾರತಕ್ಕೆ ಸಂಬಂಧಿಸಿದ ಅತೀ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ ಒದಗಿಸಿದ್ದಾಳೆ. ಅದರಿಂದಾಗಿ ಅಧಿಕೃತ ರಹಸ್ಯ ಮಾಹಿತಿ ಕಾಯ್ದೆ ಮತ್ತು ಭಾರತೀಯ  ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಅಕೆಯ ವಿರುದ್ದ ಕೇಸು ದಾಖಲಿಸಲಾಗಿದೆ.ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಆಕೆ ಈ ಘಟನೆ ನಿರ್ಲಕ್ಷ್ಯದಿಂದ ಸಂಭವಿಸಿದೆ. ಪಹಲ್ಗಾಮ್‌ನಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಗಳಿಲ್ಲವೆಂದು ಆಕೆ  ಭಾರತವನ್ನು ಟೀಕಿಸಿದ್ದಳು. 2023ರಲ್ಲಿ  ಪಾಕಿಸ್ತಾನದ ಹೈಕಮಿಶನ್‌ಗೂ ಭೇಟಿ ನೀಡಿದ್ದ ಆಕೆ ಡ್ಯಾನಿಶ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಳೆಂದೂ ಆರೋಪಿಸಲಾಗಿದ್ದು,ಆತ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ಅ ಸಂಪರ್ಕ ಹೊಂದಲು ಜ್ಯೋತಿಗೆ  ಅಗತ್ಯದ   ಸಹಾಯವನ್ನೂ ಮಾಡಿದ್ದಳು ಎಂದು ಆರೋಪಿಸಲಾಗಿದೆ.

You cannot copy contents of this page