ಪುದುಪಳ್ಳಿ ವಿಧಾನಸಭೆಗೆ ಉಪ ಚುನಾವಣೆ: ಚಾಂಡಿ ಉಮ್ಮನ್ ಯುಡಿಎಫ್ ಉಮೇದ್ವಾರ

ತಿರುವನಂತಪುರ: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಹಿರಿಯ ನೇತಾರ ಉಮ್ಮನ್‌ಚಾಂಡಿಯವರ ನಿಧನದಿಂದ ತೆರವುಗೊಂಡ ಕೋಟಯಂ ಜಿಲ್ಲೆಯ ಪುದುಪಳ್ಳಿ ವಿಧಾನಸಭೆಗೆ ಸೆಪ್ಟಂಬರ್ ೫ರಂದು ಉಪ ಚುನಾವಣೆ ನಡೆಯಲಿದೆ.

ಪುದುಪಳ್ಳಿ ವಿಧಾನಸಭಾ ಕ್ಷೇತ್ರವನ್ನು ಸತತ ೫೨ ವರ್ಷದ ದೀರ್ಘಕಾಲ ಶಾಸಕರಾಗಿ ಪ್ರತಿನಿಧಿಕರಿಸಿದ್ದ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿಯವರ ಪುತ್ರ ಚಾಂಡಿ ಉಮ್ಮನ್‌ರನ್ನೇ ಉಪ ಚುನಾವಣೆಯಲ್ಲಿ ಉಮೇದ್ವಾರರನ್ನಾಗಿ ಕಣಕ್ಕಿಳಿಸಲು ಯುಡಿಎಫ್ ತೀರ್ಮಾನಿಸಿದೆ.

ಎಡರಂಗ ಉಮೇದ್ವಾರರನ್ನು ಇನ್ನಷ್ಟೇ ತೀರ್ಮಾನಿಸಬೇಕಾಗಿದೆ.  ೨೦೨೧ರಲ್ಲಿ ನಡೆದ ಚುನಾವಣೆಯಲ್ಲಿ ಪುದುಪಳ್ಳಿ ವಿಧಾನಸಭೆಯಲ್ಲಿ ೧,೭೫, ೯೫೯ ಮತದಾರರ ಪೈಕಿ ೧,೩೧,೭೯೭ ಮಂದಿ ತಮ್ಮ ಮತದಾನ ಹಕ್ಕು ಚಲಾಯಿಸಿದ್ದರು. ಇದರಲ್ಲಿ ಉಮ್ಮನ್‌ಚಾಂಡಿ (ಯುಡಿಎಫ್)ರಿಗೆ ೬೩೩೭೨ ಮತಗಳು ಲಭಿಸಿ ಗೆದ್ದರೆ, ಎಡರಂಗದ ಅಭ್ಯರ್ಥಿ ಜೈಕ್ ಸಿ. ಥೋಮಸ್‌ರಿಗೆ ೫೪,೩೨೮ ಮತಗಳು ಲಭಿಸಿದ್ದವು. ಇನ್ನು ಎನ್‌ಡಿಎ ಉಮೇದ್ವಾರ ಎಸ್. ಹರಿ ಅವರಿಗೆ ೧೧,೬೯೪ ಮತಗಳು ಲಭಿಸಿದರೆ, ಬಿಎಸ್‌ಪಿಯ ಅಭಿಲಾಷ್ ಪಿ.ಪಿ.ಗೆ ೭೩ ಎಸ್‌ಯುಪಿಐಯ ಎಂ.ವಿ. ಚೆರಿಯನ್‌ರಿಗೆ ೧೪೬ ಮತ್ತು ಪಕ್ಷೇತರ ಉಮೇದ್ವಾರ ಜೋರ್ಜ್ ಜೋಸೆಫ್ ವಾದುಪಳ್ಳಿ ೯೯೭ ಮತಗಳು ಲಭಿಸಿದ್ದವು. ನೋಟಾಕ್ಕೆ ೪೯೭ ಮತಗಳು ಲಭಿಸಿತ್ತು. ಆ ಚುನಾವಣೆಯಲ್ಲಿ ಉಮ್ಮನ್ ಚಾಂಡಿಯವರು ೯೦೪೪ ಮತಗಳ ಅಂತರದಲ್ಲಿ ಗೆದ್ದಿದ್ದರು. ಸೆಪ್ಟಂಬರ್ ಐದರಂದು ಇತರ ಹಲವು ರಾಜ್ಯಗಳಲ್ಲಿ ತೆರವು ಬಿದ್ದಿರುವ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆಗೆ ಆಗಸ್ಟ್ ೧೭ರ ತನಕ ಅವಕಾಶ ನೀಡಲಾಗಿದೆ. ಅ. ೧೮ರಂದು ನಾಮಪತ್ರಿಕೆಗಳ ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ಅ. ೨೧ರೊಳಗಾಗಿ ನಾಮಪತ್ರ ಹಿಂತೆಗೆದುಕೊಳ್ಳಬಹುದು. ಮತ ಎಣಿಕೆ ಸೆಪ್ಟಂಬರ್ ೫ರಂದು ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page