ಪೈವಳಿಕೆಯಲ್ಲಿ ಹೊಸ ಪೊಲೀಸ್ ಠಾಣೆ ಬಗ್ಗೆ ಚರ್ಚೆ ನಡೆಸಿದ ಡಿಜಿಪಿ
ಕಾಸರಗೋಡು: ಮಂಜೇಶ್ವರ ಮತ್ತು ಕುಂಬಳೆ ಪೊಲೀಸ್ ಠಾಣೆಗಳನ್ನು ವಿಭಜಿಸಿ ಪೈವಳಿಕೆಯಲ್ಲಿ ಹೊಸ ಪೊಲೀಸ್ ಠಾಣೆ ಆರಂಭಿಸುವ ವಿಷಯದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾವಡ ಎ ಚಂದ್ರಶೇಖರನ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಜಿಲ್ಲೆಯ ವರಿಷ್ಠ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡ ಸಭಯಲ್ಲಿ ಚರ್ಚೆ ನಡೆಸಿದರು.
ಪೈವಳಿಕೆ ಪೊಲೀಸ್ ಠಾಣೆ ನಿರ್ಮಿಸಲು ಬಾಯಿಕಟ್ಟೆಯಲ್ಲಿ ೫೦ ಸೆಂಟ್ಸ್ ಸ್ಥಳವನ್ನು ಕಂದಾಯ ಇಲಾಖೆ ಎರಡು ವರ್ಷಗಳ ಹಿಂದೆಯೇ ಪೊಲೀಸ್ ಇಲಾಖೆಗೆ ಹಸ್ತಾಂತ ರಿಸಿದೆ. ಆದರೆ ಇಲ್ಲಿ ಪೊಲೀಸ್ ಠಾಣೆ ನಿರ್ಮಿಸುವ ವಿಷಯದಲ್ಲಿ ಇನ್ನು ಯಾವುದೇ ಕ್ರಮ ಉಂಟಾಗಿಲ್ಲ. ಆ ವಿಷಯದ ಬಗ್ಗೆ ಡಿಜಿಪಿ ಚರ್ಚೆ ನಡೆಸಿ ಆ ಬಗ್ಗೆ ಶೀಘ್ರ ಅಂತಿಮ ತೀರ್ಮಾನಕ್ಕೆ ಬರಲಾಗುವುದೆಂದೂ ತಿಳಿಸಿದ್ದಾರೆ. ಜಿಲ್ಲೆಯ ಗಡಿ ಪ್ರದೇಶದ ಮೂಲಕ ಕೇರಳಕ್ಕೆ ಕರ್ನಾಟಕದಿಂದ ವ್ಯಾಪಕ ಪ್ರಮಾಣದಲ್ಲಿ ಮಾದಕದ್ರವ್ಯ ಹರಿದುಬರತೊಡಗಿದ್ದು, ಅದನ್ನು ತಡೆಗಟ್ಟಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗಡಿಪ್ರದೇಶ ಮೂಲಕ ಕೇರಳಕ್ಕೆ ಮಾದಕದ್ರವ್ಯ ವಾದ ಎಂಡಿಎಂಎ ಗಾಂಜಾ ಇತ್ಯಾದಿಗಳು ಭಾರೀ ಪ್ರಮಾಣದಲ್ಲಿ ಕೇರಳಕ್ಕೆ ಹರಿದುಬರುತ್ತಿದೆ. ಅದನ್ನು ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಡಿಜಿಪಿ ನಿರ್ದೇಶ ನೀಡಿದರು. ಆದರೆ ಜಿಲ್ಲೆಯಲ್ಲಿ ಅಗತ್ಯದಷ್ಟು ಪೊಲೀಸರಿಲ್ಲವೆಂಬ ದೂರು ಕೂಡಾ ಸಭೆಯಲ್ಲಿ ಇದೇ ವೇಳೆ ಉಂಟಾಯಿತು.