ಪ್ರಧಾನಿ ನೀತಿ ಸಂಹಿತೆ: ಉಲ್ಲಂಘಿಸಿಲ್ಲ- ಚುನಾವಣಾ ಆಯೋಗ
ನವದೆಹಲಿ: ಉತ್ತರಪ್ರದೇಶದ ಪಿಲಿಬಿತ್ತ್ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ನೀಡಲಾದ ದೂರನ್ನು ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ ಈ ಪ್ರಕರಣದಲ್ಲಿ ಯಾವುದೇ ರೀತಿಯ ನೀತಿ ಸಂಹಿತೆ ನಡೆದಿಲ್ಲ ಎಂದು ಕೊನೆಗೆ ತೀರ್ಪು ನೀಡಿದೆ. ಆ ಮೂಲಕ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದೆ. ಲೋಕಸಭಾ ಚುನಾವಣಾ ವೇಳೆಯಲ್ಲೇ ಚುನಾವಣಾ ಆಯೋಗ ನೀಡಿರುವ ಈ ಕ್ಲೀನ್ ಚಿಟ್ ಮೋದಿಗೆ ಒಂದು ಬಿಗ್ ರಿಲೀಫ್ ಲಭಿಸಿದಂತಾಗಿದೆ.
ಎಪ್ರಿಲ್ ೯ರಂದು ಪಿಲಿಬಿತ್ತ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಮೇಲೆ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು. ಈ ರ್ಯಾಲಿಯಲ್ಲಿ ಮೋದಿ ಧರ್ಮದ ಆಧಾರದಲ್ಲಿ ಮತಯಾಚನೆ ನಡೆಸಿದ್ದಾರೆಂದೂ ಅದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಯಾಗಿದೆ ಯೆಂದು ಆರೋಪಿಸಿ ಸುಪ್ರೀಂಕೋ ರ್ಟ್ ವಕೀಲ ಆನಂದ್ ಎಸ್ ಜೋಂಡಾಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದರ ಹೊರತಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚ್ಚೂರಿಯವರೂ ಈ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆದರೆ ಚುನಾವಣಾ ಭಾಷಣದಲ್ಲಿ ರಾಮ ಮಂದಿರ ನಿರ್ಮಾಣ ಪ್ರಸ್ತಾಪದಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲವೆಂದು ಚುನಾವಣಾ ಆಯೋಗ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.