ಪ್ರಾಕೃತಿಕ ದುರಂತ: ಇಂದು ಸಂಜೆ ಮೊಳಗಲಿದೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೈರನ್
ಕಾಸರಗೋಡು: ಮಳೆಗಾಲ ಆರಂಭ ಗೊಂಡಿರುವಂತೆಯೇ ಈ ವೇಳೆ ಎಲ್ಲಿಯಾದರೂ ಪ್ರಾಕೃತಿಕ ದುರಂತ ನಡೆದಲ್ಲಿ, ಆ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲು ಇನ್ನು ಮೊಳಗಲಿದೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೈರನ್.
ಇದರಂತೆ ಪರೀಕ್ಷಾರ್ಥವಾಗಿ ಇಂದು ಸಂಜೆ ೪ ಗಂಟೆಗೆ ಸೈರನ್ ಶಬ್ದ ಮೊಳಗಲಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಶ್ರಯದ ಕವಚ ಎಂಬ ಯೋಜನೆಯಂತೆ ಜಿಲ್ಲೆಯ ಆರು ಕೇಂದ್ರಗಳಲ್ಲಿ ಇಂತಹ ಸೈರನ್ ಸ್ಥಾಪಿಸಲಾಗಿದೆ. ಅವೆಲ್ಲಾ ಇಂದು ಸಂಜೆ ಪರೀಕ್ಷಣಾರ್ಥವಾಗಿ ಸೈರನ್ ಮೊಳಗಿಸಲಿದೆ.
ನಗರದ ಅಡ್ಕತ್ತಬೈಲು ಜಿಎಫ್‌ಯುಪಿಎಸ್, ಚೆರುವತ್ತೂರು ಜಿಎಫ್‌ವಿಎಸ್‌ಎಸ್, ಕೂಡ್ಲು ಸೈಕ್ಲೋನ್ ಶೆಲ್ಟರ್, ಕುಂಬಳೆ ಜಿಎಚ್‌ಎಸ್‌ಎಸ್, ಪುಲ್ಲೂರು ಪೆರಿಯಾ ಸೈಕ್ಲೋನ್ ಶೆಲ್ಟರ್ ಮತ್ತು ವೆಳ್ಳರಿಕುಂಡ್ ತಾಲೂಕು ಕಚೇರಿಗಳಲ್ಲಿ ಇಂತಹ ಸೈರನ್‌ಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಣಾರ್ಥವಾಗಿ ಇಂತಹ ಸೈರನ್ ಮೊಳಗಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಜನರು ಗಾಬರಿ ಪಡುವ ಅಗತ್ಯವಿಲ್ಲವೆಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.