ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ : ಆರೋಪಿಗೆ ಜೀವಾವಧಿ ಸಜೆ, ಜುಲ್ಮಾನೆ
ಕಾಸರಗೋಡು: ಚಾಕ್ಲೆಟ್ ನೀಡುವ ಆಮಿಷವೊಡ್ಡಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಯುವಕನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಮುನ್ನಾಡ್ ವಟ್ಟಂತ್ತ್ತಡ್ಕ ನಿವಾಸಿ ಬಿ. ಆದರ್ಶ್ (28) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಎಸ್.ಸಿ ಮತ್ತು ಎಸ್‌ಟಿ ಪಿಒಎ ಸೆಕ್ಷನ್ ಪ್ರಕಾರ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಪೋಕ್ಸೋ ಕಾನೂನು ಪ್ರಕಾರ 20 ವರ್ಷ ಸಜೆ ಮತ್ತು 11,000 ರೂ. ಜುಲ್ಮಾನೆ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2023 ಜುಲೈ 4ರಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಚಾಕ್ಲೆಟ್ ನೀಡುವ ಆಮಿಷವೊಡ್ಡಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಬೇಡಗಂ ಪೊಲೀಸರು ಆರೋಪಿ ವಿರುದ್ಧ ಕೇಸು ದಾಖಲಿಸಿ ಕೊಂಡಿದ್ದರು. ಬಳಿಕ ಅಂದು ಕಾಸರಗೋಡು ಎಸ್‌ಎಂಎಸ್ ಡಿವೈಎಸ್‌ಪಿಯಾಗಿದ್ದ ಎ. ಸತೀಶ್ ಕುಮಾರ್ ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ನ್ಯಾಯಾಲಯದಲ್ಲಿ ವಾದಿಸಿದ್ದರು.