ಬೆಂಗಳೂರಿನಲ್ಲಿ ಅಸ್ಸಾಂ ನಿವಾಸಿ ಪ್ರಿಯತಮೆಯನ್ನು ಕೊಲೆಗೈದು ಪರಾರಿಯಾಗಿದ್ದ ಕಣ್ಣೂರು ನಿವಾಸಿ ಸೆರೆ
ಕಣ್ಣೂರು: ಬೆಂಗಳೂರಿನಲ್ಲಿ ಅಸ್ಸಾಂ ನಿವಾಸಿಯಾದ ಪ್ರಿಯತಮೆಯನ್ನು ಕೊಲೆಗೈದು ಪರಾರಿಯಾಗಿದ್ದ ಕಣ್ಣೂರು ನಿವಾಸಿ ಯುವಕ ಸೆರೆಗೀಡಾಗಿದ್ದಾನೆ.
ಕಣ್ಣೂರು ತೋಟದ ನಿವಾಸಿ ಆರವ್ ಹನೋಯ್ (21) ಎಂಬಾತ ಸೆರೆಗೀಡಾದ ಆರೋಪಿ ಯಾಗಿದ್ದಾನೆ. ಬೆಂಗಳೂರು ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಪ್ರಿಯತಮೆ ಮಾಯಾ ಗಗೋಯ್ (20) ಎಂಬಾಕೆ ಕೊಲೆಗೀಡಾದ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದಳು. ಆರವ್ ಹಾಗೂ ಮಾಯಾ ನ.೨೩ರಂದು ಮಧ್ಯಾಹ್ನ ಅಪಾರ್ಟ್‌ಮೆಂಟ್‌ನಲ್ಲಿ ಕೊಠಡಿ ಪಡೆದಿದ್ದರೆನ್ನಲಾಗಿದೆ. ೨೪ರಂದು ಅವರೊಳಗೆ ವಾಗ್ವಾದ ನಡೆದಿದ್ದು, ಆ ವೇಳೆ ಮಾಯಾಳಿಗೆ ಚಾಕುವಿನಿಂದ ಇರಿದು ಆರವ್ ಕೊಲೆಗೈದಿದ್ದಾನೆಂದು ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೊಲೆಯ ಬಳಿಕ ಎರಡು ದಿನ ಮೃತದೇಹದ ಜತೆಗೇ ಇದ್ದನು. ಮೃತದೇಹವನ್ನು ಬೇರೆಡೆಗೆ ಸಾಗಿಸುವ ಯೋಜನೆಯಿರಿಸಿದ್ದನು. ಆದರೆ ಅದು ವಿಫಲಕೊಂಡಾಗ 26ರಂದು ಬೆಳಿಗ್ಗೆ ಅಪಾರ್ಟ್‌ಮೆಂಟ್‌ನಿಂದ ಪರಾರಿಯಾಗಿದ್ದನೆದು ತಿಳಿಸಲಾಗಿದೆ. ಬಳಿಕ ಆರೋಪಿ ರಾಯಚೂರು, ಮಧ್ಯಪ್ರದೇಶ ಸಹಿತ ವಿವಿಧೆಡೆಗೆ ತೆರಳಿ ನಿನ್ನೆ ಬೆಂಗಳೂರಿಗೆ ಹಿಂತಿರುಗಿದ್ದನು. ಈ ವೇಳೆ ಆತನನ್ನು ಬಂಧಿಸಲಾಗಿದೆ ಎಂದೂ ತಿಳಿದು ಬಂದಿದೆ.
ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ತಲುಪಿದ್ದ ಆರವ್ ಕೋರಮಂಗಲದ ಸಂಸ್ಥೆಯೊಂದರಲ್ಲಿ ಡಿಪ್ಲೊಮಾ ಮಾಡಿದ್ದನೆನ್ನಲಾಗಿದೆ. ಈ ವೇಳೆ ಮಾಯಾಳನ್ನು ಪರಿಚಯಗೊಂಡಿದ್ದನು. ಕಳೆದ ಆರು ತಿಂಗಳಿಂದ ಅವರ ಮಧ್ಯೆ ಪ್ರೇಮವಿತ್ತು. ಇದೇ ವೇಳೆ ಮಾಯಾ ಬೇರೆ ಯುವಕರೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದಳೆಂದೂ ಇದೇ ಕಾರಣಕ್ಕೆ ಅವರೊಳಗೆ ಮನಸ್ತಾಪವುಂಟಾಗಿ ಕೊನೆಗೆ ಅದು ಯುವತಿಯ ಕೊಲೆಯಲ್ಲಿ ಪರ್ಯವಸಾನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.