ಬೇಕರಿಯಲ್ಲಿ ಗ್ರಾಹಕ ಮರೆತುಹೋದ ಮೊಬೈಲ್ ಫೋನ್ ತನ್ನದೆಂದು ತಿಳಿಸಿ ಲಪಟಾಯಿಸಿದ ಬೇರೊಬ್ಬ ವ್ಯಕ್ತಿ; ಯಥಾರ್ಥ ವಾರಸುದಾರ ಬಂದಾಗ ವ್ಯಾಪಾರಿಗೆ ಕಾಡಿತು ಚಿಂತೆ

ಕುಂಬಳೆ: ಬೇಕರಿಯಲ್ಲಿ  ಗ್ರಾಹಕ ರೊಬ್ಬರು ಮರೆತುಹೋದ ಮೊಬೈಲ್ ಫೋನ್ ತನ್ನದೆಂದು ತಿಳಿಸಿ ಬೇರೊಬ್ಬ ವ್ಯಕ್ತಿ ಲಪಟಾಯಿಸಿದ ಘಟನೆ ನಡೆದಿದೆ.

ಕುಂಬಳೆ ಪೇಟೆಯಲ್ಲಿರುವ  ಬೇಕರಿಯೊಂದಕ್ಕೆ ನಿನ್ನೆ ಮಧ್ಯಾಹ್ನ ತಲುಪಿದ ಗ್ರಾಹಕರೊಬ್ಬರು ಸಾಮಗ್ರಿ ಖರೀದಿಸಿ ಮರಳುವಾಗ ಅವರ  ಫೋನ್ ಬೇಕರಿಯಲ್ಲಿ ಮರೆತು ಹೋಗಿ ದ್ದರು. ಅದನ್ನು ಬೇರೊಬ್ಬ ಗ್ರಾಹಕ ಬೇಕರಿಯ ವ್ಯಾಪಾರಿಗೆ ನೀಡಿದ್ದರು. ಮೊಬೈಲ್ ಫೋನ್ ಯಾರದ್ದೆಂದು ವ್ಯಾಪಾರಿ ಹುಡುಕಾಡುತ್ತಿದ್ದಾಗ ಅಲ್ಲೇ ಸಮೀಪದಲ್ಲಿದ್ದ ವ್ಯಕ್ತಿ ಹೊರಗೆ ಹೋಗಿ ಸ್ವಲ್ಪ ಹೊತ್ತಿನ ಬಳಿಕ ಮರಳಿ ಬಂದು  ತನ್ನ ಮೊಬೈಲ್ ಫೋನ್ ಮರೆತು ಹೋಗಿರುವುದಾಗಿ ತಿಳಿಸಿದ್ದನು. ಅದನ್ನು ನಂಬಿದ ವ್ಯಾಪಾರಿ  ಮೊಬೈಲ್ ಆತನಿಗೆ ನೀಡಿದ್ದರು. ಮೊಬೈಲ್ ಪಡೆದ ವ್ಯಕ್ತಿ ಕೂಡಲೇ ಅಲ್ಲಿಂದ ಕಾಲ್ಕಿತ್ತನು. ಅಲ್ಪ ಹೊತ್ತಿನ ಬಳಿಕ ಮೊಬೈಲ್ ಫೋನ್‌ನ ಯಥಾರ್ಥ ವಾರಸುದಾರ ಬೇಕರಿಗೆ ತಲುಪಿ ಮೊಬೈಲ್ ಫೋನ್ ಮರೆತು ಹೋಗಿರುವುದಾಗಿ ತಿಳಿಸಿದಾಗಲೇ ವಂಚನೆ ನಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ವ್ಯಾಪಾರಿ  ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬೇಕರಿಗೆ ತಲುಪಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಮೊಬೈಲ್ ಫೋನ್ ಪಡೆದುಕೊಂಡು ಕಾಲ್ಕಿತ್ತ ವ್ಯಕ್ತಿಯ ಚಿತ್ರ ಕಂಡುಬಂದಿದೆ. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿರುವಾಗಲೇ ಮೊಬೈಲ್ ಲಪಟಾಯಿಸಿದ  ವ್ಯಕ್ತಿ ಇಂದು ಬೆಳಿಗ್ಗೆ ಪೊಲೀಸ್ ಠಾಣೆಗೆ ತಲುಪಿ ಮೊಬೈಲ್ ಒಪ್ಪಿಸಿ ಕ್ಷಮೆ ಕೇಳಿದ್ದಾನೆ. ಈ ವೇಳೆ ಪೊಲೀಸರು ಆತನಿಗೆ ತಾಕೀತುನೀಡಿ ಕಳುಹಿಸಿದರು. ಇದೇ ವೇಳೆ ಮೊಬೈಲ್ ಫೋನ್ ಲಪಟಾಯಿಸಿದ ಬಗ್ಗೆ ಲಿಖಿತವಾಗಿ ದೂರು ಲಭಿಸದ ಹಿನ್ನೆಲೆ ಯಲ್ಲಿ ಕೇಸು ದಾಖಲಿಸಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page