ಬೇಕೂರು ಕುಟುಂಬ ಕ್ಷೇಮ ಕೇಂದ್ರ ಕಟ್ಟಡ ಪೂರ್ತಿಯಾದರೂ ಉದ್ಘಾಟನೆ ವಿಳಂಬ
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಬೇಕೂರು ಕುಟುಂಬ ಕ್ಷೇಮಕೇಂದ್ರದ ನೂತನ ಕಟ್ಟಡದ ಕಾಮಗಾರಿ ಪೂರ್ತಿ ಗೊಂಡಿದ್ದರೂ ಉದ್ಘಾಟನೆಗೆ ವಿಳಂಬವಾಗುತ್ತಿರುವುದಾಗಿ ದೂರಲಾಗಿದೆ. ಶಾಸಕರ ನಿಧಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಗುತ್ತಿಗೆದಾರ ಬಿಟ್ಟುಕೊಟ್ಟಿದ್ದರೂ ವಯರಿಂಗ್ ಹಾಗೂ ಆವರಣಗೋಡೆ ಕೆಲಸಗಳು ಬಾಕಿ ಉಳಿದಿವೆ. ಇದಕ್ಕಾಗಿ ಪಂಚಾಯತ್ ಹಣ ಬಿಡುಗಡೆಗೊಳಿಸಿದೆ ಎಂದು ಹೇಳಲಾಗುತ್ತಿದೆ.
ಹಳೆಯದಾದ ಹೆಂಚು ಹಾಕಿದ ಕಟ್ಟಡದಲ್ಲೇ ಸುಮಾರು 60 ವರ್ಷಗಳ ಕಾಲ ಈ ಕೇಂದ್ರ ಕಾರ್ಯಾಚರಿಸುತ್ತಿತ್ತು. ಕ್ರಮೇಣ ಕಟ್ಟಡ ಶೋಚನೀಯ ಸ್ಥಿತಿಗೆ ತಲುಪಿದಾಗ ಸ್ಥಳೀಯರ ಹಾಗೂ ವಾರ್ಡ್ ಪ್ರತಿನಿಧಿಗಳ ನಿರಂತರ ಒತ್ತಡದಿಂದ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಇದನ್ನು ಉದ್ಘಾಟನೆ ನಡೆಸದಿರು ವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಕಟ್ಟಡ ಈಗ ಊಟಕ್ಕಿಲ್ಲದ ಉಪ್ಪಿನಕಾಯಿಯಂ ತಾಗಿದೆ ಎಂದು ದೂರುತ್ತಾರೆ. ಈಗ ಕುಟುಂಬಕ್ಷೇಮ ಕೇಂದ್ರ ಸಮೀಪದ ಶಾಲೆಯ ಕೊಠಡಿಯಲ್ಲಿ ಕಾರ್ಯಾಚರಿಸುತ್ತಿದೆ. ಪಂಚಾಯತ್ ಅಧಿಕಾರಿಗಳು ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಪೂರ್ತಿಗೊಳಿಸಿ ಕಟ್ಟಡ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.