ಬೈಕ್‌ಗಳನ್ನು ಕಳವುಗೈದು ಕುಖ್ಯಾತನಾದ ಆರೋಪಿ ಸೆರೆ
ಕಾಸರಗೋಡು: ಬೈಕ್‌ಗಳನ್ನು ಕಳವು ನಡೆಸಿ ಕುಖ್ಯಾತನಾದ ಆರೋಪಿ ಮತ್ತೊಮ್ಮೆ ಸೆರೆಗೀಡಾಗಿದ್ದಾನೆ. ತೆಕ್ಕಿಲ್ ನಿವಾಸಿ ನವಾಸ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಕಾಞಂಗಾಡ್ ನಗರದ ಜವುಳಿ ಅಂಗಡಿ ಸಮೀಪದಲ್ಲಿ ಕಳವು ನಡೆಸಲು ಯತ್ನಿಸುತ್ತಿದ್ದಾಗ ಈತನನ್ನು ಹೊಸದುರ್ಗ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ.
ಹೊಸದುರ್ಗದಲ್ಲಿ ಈತನ ವಿರುದ್ಧ ಬೇರೆ ಕೇಸುಗಳಿಲ್ಲದ ಹಿನ್ನೆಲೆಯಲ್ಲಿ ಈತನನ್ನು ಹೆಚ್ಚಿನ ತನಿಖೆಗಾಗಿ ಕಾಸರಗೋಡು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕೀಲಿ ಕೈ ಸಹಿತ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವುಗೈಯ್ಯುವುದು ಈತನ ರೀತಿಯಾಗಿದೆ. ಆ ವಾಹನದಲ್ಲಿ ಪೆಟ್ರೋಲ್ ಮುಗಿದೊಡನೆ ಅದನ್ನು ಉಪೇಕ್ಷಿಸಿ ಬೇರೆ ಬೈಕ್ ಕಳವು ನಡೆಸುವುದು ಈತನ ಕೃತ್ಯವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಈ ರೀತಿಯಲ್ಲಿ 20 ದ್ವಿಚಕ್ರವಾಹನಗಳನ್ನು ಈತ ಕಳವು ನಡೆಸಿರುವುದಾಗಿ ತಿಳಿದುಬಂದಿದೆ. ಇದರಂತೆ ಕಾಸರಗೋಡು, ಮೇಲ್ಪರಂಬ ಪೊಲೀಸರು ಹಾಗೂ ಕರ್ನಾಟಕ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಕಾಞಂಗಾಡ್‌ನಲ್ಲಿ ಸೆರೆಗೀಡಾಗಿದ್ದಾನೆ.