ಭಾರತ ಸೇನೆಯಲ್ಲಿ ತೀಯಾ ರೆಜಿಮೆಂಟ್ ಮರು ಸ್ಥಾಪಿಸಲು ಒತ್ತಾಯ
ಮಂಜೇಶ್ವರ: ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಸೇನೆಯಲ್ಲಿದ್ದ ತೀಯಾ ರೆಜಿಮೆಂಟ್‌ನ್ನು ಮರು ಸ್ಥಾಪಿಸಬೇಕೆಂದು ತೀಯಾ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ರಾಘವ ಪೈವಳಿಕೆ ಆಗ್ರಹಪಟ್ಟಿದ್ದಾರೆ. ೧೯೫೦ರ ವರೆಗೆ ಸಿಖ್ ರೆಜಿಮೆಂಟ್, ಕೂರ್ಗ್ ರೆಜಿಮೆಂಟ್ ಅಸ್ಸಾಂ ರೈಫಲ್ಸ್, ಗೂರ್ಖ ಪಡೆಗಳಂತೆಯೇ ತೀಯಾ ರೆಜಿಮೆಂಟ್ ಕೂಡ ಬ್ರಿಟಿಷ್, ಫ್ರೆಂಚ್ ಸೇನೆಯಲ್ಲಿತ್ತು. ಕ್ರಿ.ಶ. ೧೭೫೦ ರಲ್ಲೇ ತೀಯಾ ರೆಜಿಮೆಂಟ್ ಅಸ್ತಿತ್ವದಲ್ಲಿತ್ತೆಂದು ದಾಖಲೆಗಳಿಂದ ತಿಳಿದುಬರುತ್ತದೆ. ತೀಯಾ ರೆಜಿಮೆಂಟ್ ಬ್ರಿಟಿಷ್ ಹಾಗೂ ಫ್ರೆಂಚ್ ಸರಕಾರದಿಂದ ರಚಿಸಲ್ಪಟ್ಟ ಮಿಲಿಟರಿ ವಿಭಾಗವಾಗಿದ್ದು, ಸೇನೆಗೆ ಕಣ್ಣೂರು ಜಿಲ್ಲೆಯಿಂದ ಸಾವಿರಾರು ಮಂದಿ ತೀಯಾ ಸಮುದಾಯವರನ್ನು ನೇಮಿಸಲಾಗಿತ್ತು.
ತೀಯಾ ರೆಜಿಮೆಂಟ್ ತಲಶ್ಶೇರಿ ಕೇಂದ್ರೀಕರಿಸಿ ಕಾರ್ಯಾಚರಿಸ ತೊಡಗಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಅಡಿಯಲ್ಲಿ ಸ್ಥಳೀಯ ಸೈನಿಕರಿಗೆ ಸುಬೇದಾರ್ ಮತ್ತು ಜೆಮೆಂದರ್ ಹುದ್ದೆಗಳನ್ನು ಹೊಂದಿದ್ದ ಅನೇಕ ತೀಯಾ ಸಮುದಾಯದವರಿದ್ದರು. ಮಾಹೆ ಮತ್ತು ತಲಶ್ಶೇರಿಯಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸರಕಾರ ರಚಿಸಿದ ತೀಯಾ ರೆಜಿಮೆಂಟ್‌ಗಳು ಮಂಗಳೂರು, ಕುಂದಾಪುರ, ಗೋವಾದಲ್ಲೂ ಕಾರ್ಯಾಚರಿಸುತ್ತಿದ್ದವು. ತೀಯಾ ವಿಭಾಗದಲ್ಲೇ ವಿವಿಧ ಪೊಲೀಸ್ ಮತ್ತು ಮಿಲಿಟರಿ ವಿಭಾಗ ಫ್ರೆಂಚ್ ಸೇನೆಯ ಅಧೀನದಲ್ಲಿತ್ತು. ಯೂರೋಪಿಯನ್ ರೆಜಿಮೆಂಟ್‌ನ್ನು ಬೆಂಬಲಿಸಲು ಸ್ಥಳೀಯರಾದ ತೀಯಾ ಸಮುದಾಯದಿಂದ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿತ್ತು.
ಎಲಿಜಾಡ್ರೇಪರ್ ಎಂಬವರು ೧೯೦೦ರಲ್ಲಿ ಬರೆದ ಪುಸ್ತಕದಲ್ಲಿ ತೀಯಾರನ್ನು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಸಮುದಾಯವೆಂದು ಉಲ್ಲೇಖಿಸಿದ್ದರು. ಮಲಬಾರ್‌ನ ಉತ್ತರಭಾಗದಲ್ಲಿ ಹಲವಾರು ತೀಯಾ ಕುಟುಂಬಗಳು ಸಮರ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದರು. ಅಲ್ಲದೆ ಅನೇಕ ಕುಟುಂಬಗಳು ಕಳರಿ ಪಯಟ್ ಕೇಂದ್ರದ ಗುರುಕುಲಗಳೆಂದು ಕರೆಯಲ್ಪಟ್ಟಿದ್ದವು. ಹಾಗಿರುವಾಗ ಸ್ವಾತಂತ್ರ್ಯ ಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ತೀಯಾ ರೆಜಿಮೆಂಟ್‌ನ್ನು ಬರ್ಖಾಸ್ತುಗೊಳಿಸಲು ಕಾರಣವೇನೆಂದು ಸ್ಪಷ್ಟಗೊಂಡಿಲ್ಲ. ಅದ್ದರಿಂದ ಅದನ್ನು ಮರು ಸ್ಥಾಪಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ರಾಘವ ಪೈವಳಿಕೆ ಆಗ್ರಹಪಟ್ಟಿದ್ದಾರೆ.