ಮಂಗಳೂರು- ಕಾಸರಗೋಡು- ರಾಮೇಶ್ವರ ರೈಲು ಸೇವೆಗೆ ಹಸಿರು ನಿಶಾನೆ

ಕಾಸರಗೋಡು: ಮಂಗಳೂರು (ಬೈಂದೂರು)- ಕಾಸರಗೋಡು- ರಾಮೇಶ್ವರಂ ರೂಟ್‌ನಲ್ಲಿ ರೈಲು ಸೇವೆ ಆರಂಭಿಸಬೇಕೆಂಬ ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಗೆ ಕೊನೆಗೂ ಹಸಿರುನಿಶಾನೆ ಲಭಿಸಿದೆ.

ದಕ್ಷಿಣ ರೈಲ್ವೇ ಜನರಲ್ ಮೆನೇಜರ್ ಆರ್.ಎನ್. ಸಿಂಗ್‌ರ ಅಧ್ಯಕ್ಷತೆಯಲ್ಲಿ ಪಾಲಕ್ಕಾಡ್ ರೈಲ್ವೇ ಡಿವಿಷನ್‌ನ  ವ್ಯಾಪ್ತಿಗೊಳಪಟ್ಟ ಸಂಸದರು ಪಾಲ್ಗೊಂಡ ಸಭೆಯಲ್ಲಿ ಈ ಹೊಸ ರೈಲು ಸೇವೆ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ ಈ ಹೊಸ ರೈಲು ಸೇವೆ ಮುಂದಿನ ತಿಂಗಳಿಂದ ಆರಂಭಿಸಲಿದೆ ಎಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.

ಇದರ ಹೊರತಾಗಿ ಕೊಯಂ ಬತ್ತೂರು- ಕಣ್ಣೂರು ಪ್ಯಾಸೆಂಜರ್ ರೈಲು ಸೇವೆಯನ್ನು ಮಂಗಳೂರು ತನಕ ಜುಲೈ ತಿಂಗಳೊಳಗಾಗಿ ವಿಸ್ತರಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಬೈಂದೂರಿನಿಂದ ಕಾಸರಗೋಡು, ಮಾರ್ಗವಾಗಿ ರಾಮೇಶ್ವರಕ್ಕೆ ಹೊಸ ರೈಲು ಸೇವೆ ಆರಂಭಗೊಳ್ಳುವ ಮೂಲಕ ಧಾರ್ಮಿಕ ತೀರ್ಥಾಟನ ಕೇಂದ್ರವಾದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಿಂದ ಆರಂಭಗೊಂಡು ಕಾಸರಗೋಡು ಮೂಲಕ ರಾಮೇಶ್ವರಕ್ಕೆ  ತೀರ್ಥಾಟಕರಿಗೆ ಅವಕಾಶ ಲಭಿಸಿದೆ. ಈ ರೈಲು ಸೇವೆಯನ್ನು ಮಂಗಳೂರಿನಿಂದ ಆರಂಭಿಸುವ ತೀರ್ಮಾನವನ್ನು ಸಭೆಯಲ್ಲಿ ಮೊದಲು ಕೈಗೊಳ್ಳಲಾಗಿತ್ತು. ಆದರೆ ಈ ಸೇವೆಯನ್ನು ಬೈಂದೂರಿನಿಂದ ಆರಂಭಿಸಿದ್ದಲ್ಲಿ ಅದು ತೀರ್ಥಾಟಕರಿಗೆ ಹೆಚ್ಚಿನ ಸೌಕರ್ಯವಾಗಲಿದೆ ಎಂದು ಸಭೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ತಿಳಿಸಿದರು. ಅದರಂತೆ ಆ ರೈಲು ಸೇವೆಯನ್ನು ಬೈಂದೂರಿನಿಂದ ಆರಂಭಿಸುವ ತೀರ್ಮಾನಕ್ಕೆ ಬರಲಾಗಿದೆ.

ಜ್ಯಾರಿಯಲ್ಲಿ ಗೋವಾದಿಂದ ಮಂಗಳೂರು ತನಕ ಸೇವೆ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಕಲ್ಲಿಕೋಟೆ ತನಕ ವಿಸ್ತರಿಸುವ ಹಾಗೂ ಮಂಗಳೂರು- ಕೊಯಂಬತ್ತೂರು ರೂಟ್‌ನಲ್ಲಿ ಹೊಸ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕೆಂಬ ಶಿಫಾರಸ್ಸನ್ನೂ ಸಭೆ ರೈಲ್ವೇ ಇಲಾಖೆಗೆ ಮಾಡಿದೆ.

You cannot copy contents of this page