ಮತ್ತೆ ಎ.ಐ. ಕ್ಯಾಮರಾ: ಒಂದೇ ದಿನ ಸಿಕ್ಕಿಬಿದ್ದದ್ದು 500 ಮಂದಿ
ಕಾಸರಗೋಡು: ನಿರ್ಮಾಣ ಕೆಲಸದ ನಿಮಿತ್ತ ಕಳಚಿ ತೆಗೆಯಲಾಗಿದ್ದ ರಾಷ್ಟ್ರೀಯ ಹೆದ್ದಾರಿಯ ಇಕ್ಕಡೆಗಳ ಎ.ಐ. ಕ್ಯಾಮರಾಗಳನ್ನು ಮರು ಸ್ಥಾಪಿಸಲಾಗಿದ್ದು, ಅದರ ಬೆನ್ನಲ್ಲೇ ಒಂದೇ ದಿನ ಟ್ರಾಫಿಕ್ ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ 500ರಷ್ಟು ಮಂದಿ ಸಿಕ್ಕಿ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾವಣೆ, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ದ್ವಿಚಕ್ರ ವಾಹನದಲ್ಲಿ ಮೂವರ ಸವಾರಿ, ಸೀಟ್ ಬೆಲ್ಟ್ ಧರಿಸದೆ ವಾಹನದಲ್ಲಿ ಪ್ರಯಾಣ ಇತ್ಯಾದಿ ಟ್ರಾಫಿಕ್ ಉಲ್ಲಂಘನೆಗಳಿಗೆ ಸಂಬಂಧಿಸಿ ಇವರು ಸಿಕ್ಕಿ ಬಿದ್ದವರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕೆಲಸ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು, ಕುಂಬಳೆ ಸೇರಿದಂತೆ ಹಲವೆಡೆಗಳಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ಎ.ಐ. ಕ್ಯಾಮರಾಗಳನ್ನು ತೆರವುಗೊಳಿಸಲಾಗಿತ್ತು. ಈಗ ಅದನ್ನೆಲ್ಲಾ ಪುನರ್ ಸ್ಥಾಪಿಸಲಾಗಿದೆ. ಒಂದು ವಾಹನ ಒಂದೇ ದಿನದಂದು 20 ಬಾರಿ ಟ್ರಾಫಿಕ್ ಕಾನೂನು ಉಲ್ಲಂಘಿಸಿ ಸಂಚಾರ ನಡೆಸಿರುವ ದೃಶ್ಯವೂ ಈ ಕ್ಯಾಮರಾಗಳಲ್ಲಿ ಗೋಚರಿಸಿದೆ. ಆ ಹಿನ್ನೆಲೆಯಲ್ಲಿ ಆ ವಾಹನ ಮಾಲಕರು ಬಾರೀ ಮೊತ್ತವನ್ನು ಶುಲ್ಕ ರೂಪದಲ್ಲಿ ಪಾವತಿಸಬೇಕಾಗಿ ಬರಲಿದೆ.