ಮತ್ತೆ ಚಿರತೆ ಪ್ರತ್ಯಕ್ಷ: ಜನರು ಭೀತಿಯಲ್ಲಿ
ಕಾಸರಗೋಡು: ಜಿಲ್ಲೆಯಲ್ಲಿ ಎರಡು ಚಿರತೆಗಳು ಸತ್ತು ಎರಡು ಚಿರತೆಗಳು ಬೋನಿನಲ್ಲಿ ಸಿಲುಕಿದ ಬೆನ್ನಲ್ಲೇ ಇನ್ನೊಂದು ಚಿರತೆ ಪ್ರತ್ಯಕ್ಷಗೊಂಡಿದ್ದು, ಇದು ಜನರ ಭೀತಿಯನ್ನು ಇನ್ನೂ ಮುಂದುವರಿಸುವಂತೆ ಮಾಡತೊಡಗಿದೆ. ಅಂಬಲತ್ತರ ಒಡೆಯಂಚಾಲ್‌ನ ಕ್ರೈಸ್ತ ಭಗಿನಿಯರ ಕಾನ್ವೆಂಟ್‌ನ ಆವರಣದಲ್ಲಿ ನಿನ್ನೆ ಅಪರಾಹ್ನ ೩ ಗಂಟೆ ವೇಳೆಗೆ ಚಿರತೆಯೊಂದು ನಡೆದು ಹೋಗುತ್ತಿರುವುದನ್ನು ಭಗಿನಿಯರು ಕಂಡಿದ್ದಾರೆ.
ಚಿರತೆಯನ್ನು ಕಂಡಾಕ್ಷಣ ಅವರು ಅಲ್ಲಿಂದ ಒಳಗೆ ಓಡಿ ಬಾಗಿಲು ಜಡಿದಿದ್ದಾರೆ. ನಂತರ ಫೋನ್ ಮೂಲಕ ನೆರೆಮನೆಯವರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆಯವರು ಆಗಮಿಸಿ ಆ ಪರಿಸರದಲ್ಲೆಲ್ಲ ವ್ಯಾಪಕ ಶೋಧ ನಡೆಸಿದರೂ ಚಿರತೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಚಿರತೆ ಈ ಪರಿಸರದ ನಾಯಿಗಳನ್ನು ಕೊಂದು ತಿಂದಿರುವುದಾಗಿಯೂ ತಿಳಿಸಲಾಗಿದೆ. ಕಳೆದ ವಾರ ಇದೇ ಪರಿಸರದ ಚಕಿಟ್ಟಡ್ಕದಲ್ಲಿ ಕಟ್ಟಿಹಾಕಲಾಗಿದ್ದ ಆಡೊಂದನ್ನು ಚಿರತೆ ಕೊಂದು ತಿಂದಿತ್ತು. ನಿನ್ನೆ ಚಿರತೆ ಮತ್ತೆ ಪ್ರತ್ಯಕ್ಷಗೊಂಡಿರುವುದು ಈ ಪ್ರದೇಶದ ಜನರಲ್ಲಿ ಭೀತಿ ಮತ್ತೆ ಆವರಿಸುವಂತೆ ಮಾಡಿದೆ.